ಬೆಳ್ತಂಗಡಿ | ₹7.60 ಲಕ್ಷ ಮೌಲ್ಯದ ಎಂಡಿಎಂಎ, ಗಾಂಜಾ ಜಪ್ತಿ: ಓರ್ವ ಆರೋಪಿ ಬಂಧನ, ಮತ್ತೋರ್ವ ಪರಾರಿ

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ (MDMA) ಹಾಗೂ 27 ಗ್ರಾಂ ಗಾಂಜಾ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಜುಲೈ 29ರ ರಾತ್ರಿ ಬೆಳ್ತಂಗಡಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ಹಾಗೂ ಸಿಬ್ಬಂದಿ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, KA-18 A-7203 ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ತಪಾಸಣೆ ನಡೆಸಿದರು. ಆತನು ಕುವೆಟ್ಟು ನಿವಾಸಿ ತ್ವಲಹ್ ಅಲಿಯಾಸ್ ಅನ್ವರ್ ಅಲಿಯಾಸ್ ಅನ್ಸರ್ (21) ಎಂದು ಗುರುತಿಸಲಾಗಿದೆ.

ಆತನ ಬಳಿ 27 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಯಿತು. ಬಳಿಕ ಸ್ಥಳದಲ್ಲಿದ್ದ ಆಟೋ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ, ಸುಮಾರು 76.59 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹7.60 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ, ಮಾದಕ ವಸ್ತು ನೀಡಲು ಬಂದಿದ್ದ ಮತ್ತೋರ್ವ ಆರೋಪಿ ಅಮ್ಜತ್ ಖರಾರ್ ಎಂಬಾತ KA-21 MA-4990 ಸಂಖ್ಯೆಯ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಡಿ NDPS ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Post a Comment

Previous Post Next Post