ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 130/2025ರ ಪೋಕ್ಸೋ ಪ್ರಕರಣದಲ್ಲಿ ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ (20), ತಂದೆ ಗಿಲ್ಬರ್ಟ್ ನೊರೊನ್ಹ, ದೇವಿನಗರ, ಕುಂಜತ್ತಬೈಲ್, ಮಂಗಳೂರು ನಿವಾಸಿಗೆ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-2), ಮಂಗಳೂರು ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಯು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 64(2)(m), 77, ಪೋಕ್ಸೋ ಕಾಯ್ದೆಯ ಕಲಂ 6 ಹಾಗೂ 15 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಕಲಂ 66(E) ಅಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದ ವಿವರ :
ಪ್ರಕರಣದ ಪ್ರಕಾರ, ಆರೋಪಿ 2024ರ ಫೆಬ್ರವರಿ ತಿಂಗಳಿನಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನೆಪದಲ್ಲಿ ಮನವೊಲಿಸಿ, 2024ರ ಸೆಪ್ಟೆಂಬರ್ ತಿಂಗಳಲ್ಲಿ ಮಂಗಳೂರಿನ ಶಕ್ತಿನಗರದ ಚಾಲುಕ್ಯ ಬಾರ್ ಸಮೀಪದ ಬಾಡಿಗೆ ಮನೆಯಲ್ಲಿ ಹಾಗೂ ಬಳಿಕ ಅಳಪೆ ಗ್ರಾಮದ ಕೆಂಬಾರು ಕೆ.ಇ.ಬಿ. ಮುಂಭಾಗದ ಮನೆಯೊಂದರಲ್ಲಿ 2024ರ ನವೆಂಬರ್‌ನಿಂದ 2025ರ ಜೂನ್ ತಿಂಗಳವರೆಗೆ ಹಲವು ಬಾರಿ ಅತ್ಯಾಚಾರ ಎಸಗಿದ್ದನು.
ಇದೇ ವೇಳೆ, ಬಾಲಕಿ ಸ್ನಾನಗೃಹದಲ್ಲಿದ್ದಾಗ ವೀಡಿಯೊ ಕರೆ ಮಾಡಿ ಅದರ ಸ್ಕ್ರೀನ್‌ಶಾಟ್‌ಗಳನ್ನು ಪಡೆದು ನಗ್ನ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದನು. ಅಲ್ಲದೆ, ದೈಹಿಕ ಸಂಪರ್ಕಕ್ಕೆ ನಿರಾಕರಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹಾಗೂ ಬಾಲಕಿ, ಆಕೆಯ ತಾಯಿ ಮತ್ತು ಅಕ್ಕನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದನು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ತನಿಖೆ ಮತ್ತು ತೀರ್ಪು :
ಈ ಪ್ರಕರಣದ ತನಿಖೆಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕರಾದ ಟಿ.ಡಿ. ನಾಗರಾಜ್ ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾ ದೇವಿ ಅವರು ವಾದ ಮಂಡಿಸಿದ್ದರು.
ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 6 ಹಾಗೂ BNS ಕಲಂ 64(2)(m) ಅಡಿಯಲ್ಲಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ, BNS ಕಲಂ 77 ಅಡಿಯಲ್ಲಿ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ, ಪೋಕ್ಸೋ ಕಾಯ್ದೆಯ ಕಲಂ 15 ಅಡಿಯಲ್ಲಿ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ಮತ್ತು ಐಟಿ ಕಾಯ್ದೆಯ ಕಲಂ 66(E) ಅಡಿಯಲ್ಲಿ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ತೀರ್ಪು ನೀಡಿದೆ.
Post a Comment