Shimoga : ಶಿವಮೊಗ್ಗದಲ್ಲಿ ಭೀಕರ ದುರಂತ ; ಕ್ರೇನ್‌ ಚಕ್ರದಡಿ ಸಿಲುಕಿ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದ ಕಾರ್ಮಿಕ ಸಾವು

ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ದೇವಸ್ಥಾನದ ಗೋಪುರ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಿಳಿಗೂಡು ಗ್ರಾಮದ ನಾಗೇಶ್ (48) ಎಂದು ಗುರುತಿಸಲಾಗಿದೆ. ಅವರು ಹೊಸಮನೆ ಬಡಾವಣೆಯಲ್ಲಿರುವ ದೊಡ್ಡಮ್ಮ ಜಲದುರ್ಗಮ್ಮ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಮಾಹಿತಿಯಂತೆ, ದೇವಸ್ಥಾನದ ಮುಂಭಾಗದಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದ ಕ್ರೇನ್‌ ರಿವರ್ಸ್‌ ಚಲಿಸುತ್ತಿದ್ದ ವೇಳೆ ನಾಗೇಶ್‌ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಕ್ರೇನ್‌ನ ಮುಂಭಾಗದ ಚಕ್ರಗಳು ಅವರ ಮೇಲೆ ಹರಿದಿದ್ದು, ಗಂಭೀರ ಗಾಯಗಳಾಗಿವೆ.

ತಲೆಯ ಮೇಲೆ ಚಕ್ರ ಹರಿದ ಪರಿಣಾಮ ತಲೆ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಗೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸತ್ಯನಾರಾಯಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post