ಗಣೇಶ್ ಆಚಾರ್ಯ ಅದ್ಯಪಾಡಿ
ಭಾರತದಲ್ಲಿ ಇಂಧನ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಆಗುತ್ತಿವೆ. ಇದೀಗ ದೇಶದ ಮೊದಲ 'E85' ಇಂಧನ ಕೇಂದ್ರ ದೆಹಲಿಯಲ್ಲಿ ಆರಂಭವಾಗಿದೆ. ಪೆಟ್ರೋಲ್‌ಗೆ ಹೋಲಿಸಿದರೆ E85 ಇಂಧನವು ಲೀಟರ್‌ಗೆ ಸುಮಾರು 20 ರೂಪಾಯಿಗಳಷ್ಟು ಅಗ್ಗವಾಗಿರುವುದರಿಂದ, ಗ್ರಾಹಕರಲ್ಲಿ ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಆದರೆ, ಈ ಅಗ್ಗದ ಬೆಲೆಯ ಹಿಂದೆ ಅಡಗಿರುವ ವಾಸ್ತವಾಂಶಗಳನ್ನು ಗಮನಿಸುವುದು ಅಗತ್ಯವಾಗಿದೆ.
ಏನಿದು E85 ಇಂಧನ..?
E85 ಎಂದರೆ 85% ಎಥೆನಾಲ್ ಮತ್ತು 15% ಪೆಟ್ರೋಲ್ ಮಿಶ್ರಣ. ಭಾರತ ಸರ್ಕಾರವು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು ಮತ್ತು ರೈತರ ಆದಾಯ ಹೆಚ್ಚಿಸಲು ಎಥೆನಾಲ್ ಮಿಶ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೀರೋ ಮೋಟೊಕಾರ್ಪ್‌ನ ಸ್ಪ್ಲೆಂಡರ್+ ಮತ್ತು ಎಚ್‌ಎಫ್ ಡಿಲಕ್ಸ್‌ನಂತಹ ಫ್ಲೆಕ್ಸ್-ಫ್ಯೂಯಲ್ (Flex-fuel) ಬೈಕುಗಳು ಮತ್ತು ಮಾರುತಿ ಸುಜುಕಿ ವ್ಯಾಗನ್-ಆರ್ ಫ್ಲೆಕ್ಸ್ ಫ್ಯೂಯಲ್ ಕಾರುಗಳು ಮಾರುಕಟ್ಟೆಗೆ ಬರುತ್ತಿರುವುದು ಈ ಬದಲಾವಣೆಯ ಭಾಗವಾಗಿದೆ.
ಆದರೆ ಇದರ ಹಿಂದಿನಿ ನಿಜವಾದ ಉದ್ದೇಶವೇನು ? ಎಥೆನಾಲ್ ಕೈಗಾರಿಕಾ ಲಾಭಿಗಾಗಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆಯೆ ಎನ್ನುವ ಪ್ರಶ್ನೆಯೂ ಮೂಡಿಕೊಳ್ಳುತ್ತಿದೆ.
ಮೈಲೇಜ್‌ನಲ್ಲಿ ವ್ಯತ್ಯಾಸವಿದೆಯೇ? :
E85 ಬಳಕೆಯ ಅಸಲಿ ಸವಾಲು ಇರುವುದು ಇಲ್ಲಿಯೇ. ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್‌ನಲ್ಲಿ ಶಕ್ತಿ (Energy content) ಕಡಿಮೆ ಇರುತ್ತದೆ. ಹೀಗಾಗಿ, ವಾಹನಗಳು ಒಂದೇ ದೂರವನ್ನು ಕ್ರಮಿಸಲು ಹೆಚ್ಚು ಇಂಧನವನ್ನು ಬಳಸುತ್ತವೆ. ತಜ್ಞರ ಪ್ರಕಾರ, ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ E85 ಇಂಧನವನ್ನು ಬಳಸಿದಾಗ ವಾಹನದ ಮೈಲೇಜ್ ಶೇ. 20 ರಿಂದ 30 ರಷ್ಟು ಕಡಿಮೆಯಾಗಬಹುದು. ಈ ಮೂಲಕ ಇದು ಲಾಭದಾಯಕ ಅಲ್ಲವೆನ್ನುವುದು ಸ್ಪಷ್ಟ ಹಾಗೂ ಈಗಾಗಲೇ ಓಡಿಸುತ್ತಿರುವ ವಾಹನಗಳಲ್ಲಿ ವ್ಯತಿರಿಕ್ತ ಪರಿಣಾಮವನ್ನೂ ಬೀರುವುದಲ್ಲಿ ಸಂಶಯವಿಲ್ಲ.!
ಗ್ರಾಹಕರಿಗೆ ಲಾಭವೇ ಅಥವಾ ನಷ್ಟವೇ ?
ಬೆಲೆ: ಒಂದು ಲೀಟರ್ ಬೆಲೆ ಕಡಿಮೆ ಇದೆ.
ಬಳಕೆ: ಒಂದೇ ದೂರವನ್ನು ಕ್ರಮಿಸಲು ಹೆಚ್ಚು ಲೀಟರ್ ಇಂಧನ ಬೇಕಾಗುತ್ತದೆ. ಹೀಗಾಗಿ, ಲೀಟರ್‌ಗೆ ಉಳಿತಾಯವಾಗುವ ಹಣವು ಮೈಲೇಜ್ ಕಡಿಮೆಯಾದ ಕಾರಣದಿಂದಾಗಿ ಸರಿದೂಗುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆ. ಅಂತಿಮವಾಗಿ ಕಿಲೋಮೀಟರ್‌ಗೆ ಎಷ್ಟು ಖರ್ಚು ಬೀಳುತ್ತದೆ ಎನ್ನುವುದೇ ಗ್ರಾಹಕರಿಗೆ ಮುಖ್ಯವಾದ ವಿಷಯ.
ಸರ್ಕಾರದ ಹೇಳುವುದೇನು ? :
ಭಾರತವು ತನ್ನ ಅಗತ್ಯದ ಶೇ. 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ಈ ಆಮದಿನ ಪ್ರಮಾಣವನ್ನು ತಗ್ಗಿಸುವುದು ಮತ್ತು ವಿದೇಶಿ ವಿನಿಮಯವನ್ನು ಉಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ಅಲ್ಲದೆ, ಕಬ್ಬು ಮತ್ತು ಜೋಳದಂತಹ ಬೆಳೆಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ರೈತರಿಗೂ ಹೆಚ್ಚಿನ ಆದಾಯ ಸಿಗಲಿದೆ ಎಂದು ಸರ್ಕಾರ ಅಭಿಪ್ರಾಯಪಡುತ್ತದೆ.
ಮುಂದೇನು? :
ಸದ್ಯಕ್ಕೆ E85 ಇಂಧನವು ಪಂಪ್ ದರದಲ್ಲಿ ಅಗ್ಗವಾಗಿ ಕಂಡರೂ, ದೀರ್ಘಾವಧಿಯ ಬಳಕೆಯಲ್ಲಿ ಅದರ ನಿಜವಾದ ಆರ್ಥಿಕ ಲಾಭ ಎಷ್ಟಿದೆ ಎಂಬುದು ವಾಹನ ಸವಾರರ ದೈನಂದಿನ ಬಳಕೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.
Post a Comment