ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿ ಪರಿಶೀಲನೆಗೆ ಎನ್‌ಎಂಪಿಎಗೆ ಕರ್ನಾಟಕ ಪ್ರವಾಸೋದ್ಯಮ ಕಾರ್ಯದರ್ಶಿ ಭೇಟಿ; 5 ಕ್ರೂಸ್ ಹಡಗುಗಳೊಂದಿಗೆ ಯಶಸ್ವಿ ಸೀಸನ್‌ಗೆ ತೆರೆ

ಮಂಗಳೂರು: ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳ ಪರಿಶೀಲನೆಗಾಗಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಕ್ ಚಂದ್ರ ಕೆ.ವಿ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರೊಂದಿಗೆ ಇಂದು ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ಕ್ಕೆ ಭೇಟಿ ನೀಡಿದರು.

ಎನ್‌ಎಂಪಿಎ ಉಪಾಧ್ಯಕ್ಷರಾದ ಎಸ್. ಶಾಂತಿ ಹಾಗೂ ಬಂದರಿನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಣ್ಯರನ್ನು ಸ್ವಾಗತಿಸಿದರು.
ಭೇಟಿಯ ವೇಳೆ ನವ ಮಂಗಳೂರು ಬಂದರಿನ ಕ್ರೂಸ್ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರಮುಖ ಕ್ರೂಸ್ ಪ್ರವಾಸಿ ತಾಣವಾಗಿ ರೂಪಿಸುವ ಕುರಿತು ಸವಿಸ್ತಾರ ಚರ್ಚೆ ನಡೆಯಿತು. 

ಪ್ರವಾಸೋದ್ಯಮ ಕಾರ್ಯದರ್ಶಿಗಳು ಪ್ರಯಾಣಿಕರ ಸೌಲಭ್ಯಗಳು, ವಲಸೆ ಮತ್ತು ಕಸ್ಟಮ್ಸ್ ವ್ಯವಸ್ಥೆ, ಕ್ರೂಸ್ ಟರ್ಮಿನಲ್ ಮೂಲಸೌಕರ್ಯ ಸೇರಿದಂತೆ ಕ್ರೂಸ್ ಹಡಗುಗಳ ಕಾರ್ಯಾಚರಣೆಗೆ ಅಗತ್ಯ ಸೌಲಭ್ಯಗಳನ್ನು ಪರಿಶೀಲಿಸಿದರು.
ಕರಾವಳಿ ಕರ್ನಾಟಕದ ಸುಂದರ ಕಡಲತೀರಗಳು, ದೇವಾಲಯಗಳು, ಪಾರಂಪರಿಕ ತಾಣಗಳು, ಪರಿಸರ ಪ್ರವಾಸೋದ್ಯಮ ಕೇಂದ್ರಗಳು, ಸಾಂಸ್ಕೃತಿಕ ವಲಯಗಳು ಮತ್ತು ವೆಲ್‌ನೆಸ್ ಪ್ರವಾಸೋದ್ಯಮ ತಾಣಗಳಿಗೆ ನವ ಮಂಗಳೂರು ಬಂದರು ಪ್ರಮುಖ ಪ್ರವೇಶ ದ್ವಾರವಾಗಿರುವುದನ್ನು ಎನ್‌ಎಂಪಿಎ ಅಧಿಕಾರಿಗಳು ವಿವರಿಸಿದರು. 

ಮುಂಬರುವ ಪ್ರವಾಸೋದ್ಯಮ ಸೀಸನ್‌ಗಳಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರೂಸ್ ಹಡಗುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಕುರಿತು ಚರ್ಚೆ ನಡೆಯಿತು.
ಪ್ರಯಾಣಿಕರ ಅನುಭವವನ್ನು ಸುಧಾರಿಸುವುದು, ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಕರಾವಳಿ ಭಾಗದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎನ್‌ಎಂಪಿಎ ಕೈಗೊಂಡಿರುವ ಕ್ರಮಗಳನ್ನು ಡಾ. ತ್ರಿಲೋಕ್ ಚಂದ್ರ ಪ್ರಶಂಸಿಸಿದರು. 

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಎನ್‌ಎಂಪಿಎ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಸ್ತುತ ಕ್ರೂಸ್ ಸೀಸನ್‌ನ ಐದನೇ ಮತ್ತು ಅಂತಿಮ ಕ್ರೂಸ್ ಹಡಗು ‘ಎಂ.ಎಸ್. ಸೆವನ್ ಸೀಸ್ ನ್ಯಾವಿಗೇಟರ್’ ನವ ಮಂಗಳೂರು ಬಂದರಿಗೆ ಆಗಮಿಸಿತು.
ನಾರ್ವೇಜಿಯನ್ ಕ್ರೂಸ್ ಲೈನ್ ಸಂಸ್ಥೆ ನಿರ್ವಹಿಸುವ ಬಹಾಮಾಸ್ ಧ್ವಜದ ಐಷಾರಾಮಿ ಹಡಗು 427 ಪ್ರಯಾಣಿಕರು ಮತ್ತು 372 ಸಿಬ್ಬಂದಿಯನ್ನು ಕರೆತಂದಿತ್ತು. ಮಾಲೆ, ಕೊಚ್ಚಿ, ಮಂಗಳೂರು, ಗೋವಾ ಮತ್ತು ಮುಂಬೈ ಸಂಪರ್ಕಿಸುವ ಅಂತರರಾಷ್ಟ್ರೀಯ ಪ್ರವಾಸ ಮಾರ್ಗದ ಭಾಗವಾಗಿ ಹಡಗು ಬಂದರಿಗೆ ಆಗಮಿಸಿತು.

ಪ್ರವಾಸಿಗರಿಗೆ ಸಾಂಪ್ರದಾಯಿಕ ಸಾಂಸ್ಕೃತಿಕ ಸ್ವಾಗತ, ಪ್ರವಾಸೋದ್ಯಮ ಸಹಾಯ ವ್ಯವಸ್ಥೆ, ಸ್ಥಳೀಯ ವೀಕ್ಷಣಾ ಪ್ರವಾಸಗಳು ಹಾಗೂ ಮಾರ್ಗದರ್ಶಿತ ಧ್ಯಾನ ಕಾರ್ಯಕ್ರಮಗಳನ್ನು ಎನ್‌ಎಂಪಿಎ ಮತ್ತು ಸಂಬಂಧಿತ ಸಂಸ್ಥೆಗಳು ಆಯೋಜಿಸಿತ್ತು.
‘ಎಂ.ಎಸ್. ಸೆವನ್ ಸೀಸ್ ನ್ಯಾವಿಗೇಟರ್’ ಆಗಮನದೊಂದಿಗೆ ಈ ಸಾಲಿನ ಕ್ರೂಸ್ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು 5 ಕ್ರೂಸ್ ಹಡಗುಗಳ ಭೇಟಿ ಹಾಗೂ 2,079 ಪ್ರಯಾಣಿಕರನ್ನು ನವ ಮಂಗಳೂರು ಬಂದರು ನಿರ್ವಹಿಸಿದೆ. ಇದರಿಂದ ಭಾರತದ ಪಶ್ಚಿಮ ಕರಾವಳಿಯ ಉದಯೋನ್ಮುಖ ಕ್ರೂಸ್ ಪ್ರವಾಸೋದ್ಯಮ ಕೇಂದ್ರವಾಗಿ ಎನ್‌ಎಂಪಿಎ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

ಕರಾವಳಿ ಕರ್ನಾಟಕವನ್ನು ದೇಶದ ಪ್ರಮುಖ ಕ್ರೂಸ್ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ, ಕ್ರೂಸ್ ಸಂಸ್ಥೆಗಳು ಹಾಗೂ ಇತರ ಪಾಲುದಾರರೊಂದಿಗೆ ಎನ್‌ಎಂಪಿಎ ಮುಂದುವರಿದ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
Previous Post Next Post