ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಎನ್‌ಟಿಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ ; ಸಂಪೂರ್ಣ ಮಾಹಿತಿ ನೀಡಲು ಕೇಂದ್ರ ಸರಕಾರಕ್ಕೆ ಆದೇಶ

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ವಿಚಾರಣೆಯ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ National Testing Agency ಕಾರ್ಯವೈಖರಿಯ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ, “ಪರೀಕ್ಷಾ ವ್ಯವಸ್ಥೆಯಲ್ಲಿ ಜವಾಬ್ದಾರಿತನದ ಕೊರತೆ ಕಾಣಿಸುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇಂತಹ ಅಕ್ರಮಗಳು ಮರುಕಳಿಸುತ್ತಲೇ ಇರುತ್ತವೆ” ಎಂದು ಎಚ್ಚರಿಕೆ ನೀಡಿದೆ.

ಪರೀಕ್ಷಾ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಸುರಕ್ಷಿತಗೊಳಿಸಲು ಭವಿಷ್ಯದಲ್ಲಿ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. “ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್‌ಸಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆಯುವುದಿಲ್ಲ. ಆದರೆ ನೀಟ್‌ನಲ್ಲಿ ಮರುಮರು ಸಮಸ್ಯೆಗಳು ಎದುರಾಗುತ್ತಿರುವುದು ಆತಂಕಕಾರಿ” ಎಂದು ಕೋರ್ಟ್ ಹೇಳಿದೆ.

ಪ್ರಕರಣ ಸಂಬಂಧ ರಚಿಸಲಾದ ಉನ್ನತ ಮಟ್ಟದ ಸಮಿತಿಯ ವರದಿ ಮತ್ತು ಅಫಿಡವಿಟ್ ಪರಿಶೀಲಿಸಿದ ನ್ಯಾಯಪೀಠ, ಶಿಫಾರಸುಗಳ ಅನುಷ್ಠಾನದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ವೇಳೆ ಸಮಿತಿಯ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್, ಪ್ರಶ್ನೆಪತ್ರಿಕೆ ತಯಾರಿ ಹಂತದಲ್ಲಿದ್ದ ಭದ್ರತಾ ದೋಷವನ್ನು ಈಗ ಸರಿಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆಗೆ ಮುನ್ನ ಕೇಂದ್ರ ಸರ್ಕಾರದಿಂದ ಸಮಗ್ರ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.
Previous Post Next Post