ಲೈಂಗಿಕ ಶಿಕ್ಷಣ ಕುರಿತು ಐಎಂಎ ಮಂಗಳೂರು ವತಿಯಿಂದ ವೈದ್ಯಕೀಯ ಕಾರ್ಯಾಗಾರ

ಮಂಗಳೂರು : ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳೂರು ಶಾಖೆಯ ಆಶ್ರಯದಲ್ಲಿ ಲೈಂಗಿಕ ಶಿಕ್ಷಣ ಹಾಗೂ ವೈದ್ಯಕೀಯ ಜಾಗೃತಿ ಕುರಿತ ಶೈಕ್ಷಣಿಕ ಕಾರ್ಯಾಗಾರ ನಗರದ ದೀಪಾ ಹೋಟೆಲ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕರಲ್ಲಿ ಲೈಂಗಿಕತೆಯ ಕುರಿತ ಸಂಕೋಚ, ಅನುಮಾನ ಹಾಗೂ ಸಂದೇಹಗಳನ್ನು ನಿವಾರಿಸಲು ಇಂತಹ ಕಾರ್ಯಾಗಾರಗಳು ಪರಿಣಾಮಕಾರಿ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಶಿರಸಿ ಮೂಲದ ಹಿರಿಯ ಮೂತ್ರರೋಗ ತಜ್ಞ ಡಾ. ಗಜಾನನ ಭಟ್ ಭಾಗವಹಿಸಿ, ವಾತ್ಸಾಯನ ಕಾಮಸೂತ್ರದ ಸಂಸ್ಕೃತ ಅಧ್ಯಾಯಗಳು ಮತ್ತು ಶ್ಲೋಕಗಳನ್ನು ಆಂಗ್ಲ ಹಾಗೂ ಕನ್ನಡ ಭಾಷೆಗೆ ಅನುವಾದಿಸಿ ಉಪನ್ಯಾಸ ನೀಡಿದರು. ಬಳಿಕ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಅಗತ್ಯ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಡಾ. ಗಜಾನನ ಭಟ್ ಅವರನ್ನು ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ರೋಶನ್ ಸನ್ಮಾನಿಸಿ ಅಭಿನಂದಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಅತಿಥಿಗಳು ಮತ್ತು ಸಭಿಕರನ್ನು ಸ್ವಾಗತಿಸಿ, ಜನರಲ್ಲಿ ಲೈಂಗಿಕ ಜ್ಞಾನದ ಕುರಿತ ಹಲವಾರು ಲೋಪದೋಷಗಳಿದ್ದು, ಅವುಗಳ ಕುರಿತು ಜಾಗೃತಿ ಮೂಡಿಸಲು ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ಹಾಗೂ ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ದಾನ ಉಪಸ್ಥಿತರಿದ್ದರು. ಡಾ. ಮಧುರಾ ಭಟ್ ಕಾರ್ಯಕ್ರಮ ನಿರೂಪಿಸಿದ್ದು, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.

Post a Comment

Previous Post Next Post