​ಮೇ.29ರಿಂದ ಮಂಗಳೂರಿನಲ್ಲಿ 7ನೇ ಆವೃತ್ತಿಯ 'ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026' ಮೇಳ!

ಮಂಗಳೂರು: 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಭಾರತೀಯ ಸರ್ಫಿಂಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಬಹು-ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸರ್ಫಿಂಗ್ ಫೆಡರೇಶನ್ (SFI) ಸೋಮವಾರದಂದು ಮಹತ್ವದ ಪ್ರಕಟಣೆ ಹೊರಡಿಸಿದ್ದು, 7ನೇ ಆವೃತ್ತಿಯ ‘ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026’ ಚಾಂಪಿಯನ್‌ಶಿಪ್ ಅನ್ನು ಪ್ರಕಟಿಸಿದೆ. ಈ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯು ಮೇ 29 ರಿಂದ 31 ರವರೆಗೆ ಮಂಗಳೂರಿನ ತಣ್ಣೀರುಭಾವಿಯ ‘ಬ್ಲೂ ಬೇ ಇಕೋ ಬೀಚ್’ನಲ್ಲಿ ನಡೆಯಲಿದೆ.

​ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಸತತ ಮೂರನೇ ವರ್ಷವೂ ಈ ಚಾಂಪಿಯನ್‌ಶಿಪ್‌ನ ಮುಖ್ಯ ಪ್ರಾಯೋಜಕರಾಗಿ ಮುಂದುವರಿದಿದ್ದು, ಸೈಕಲ್ ಅಗರಬತ್ತಿ ಮತ್ತು ಡಿ-ಕನ್ಸ್‌ಟ್ರಕ್ಟ್ ಸಂಸ್ಥೆಗಳು ಗೋಲ್ಡ್ ಸ್ಪಾನ್ಸರ್‌ಗಳಾಗಿ ಭಾಗವಹಿಸುತ್ತಿದ್ದು, ನಾರ್ದರ್ನ್ ಸ್ಕೈ ಸಂಸ್ಥೆಯು ವೆನ್ಯೂ ಪಾರ್ಟ್‌ನರ್ ಆಗಿದೆ. 

ಈ ಕ್ರೀಡಾಕೂಟಕ್ಕೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡುತ್ತಿವೆ. ಕರ್ನಾಟಕ ಸರ್ಕಾರವು ಸತತ 7ನೇ ವರ್ಷವೂ ಈ ಕೂಟಕ್ಕೆ ಬೆಂಬಲ ನೀಡುವ ಮೂಲಕ ಕರಾವಳಿ ಕ್ರೀಡೆಗಳ ಮೇಲಿನ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

​ಏಷ್ಯನ್ ಗೇಮ್ಸ್‌ಗೆ ಮಹತ್ವದ ವೇದಿಕೆ
​ಭಾರತೀಯ ಸರ್ಫಿಂಗ್ ಇತ್ತೀಚೆಗಷ್ಟೇ ಏಷ್ಯನ್ ಗೇಮ್ಸ್‌ಗೆ ತನ್ನ ಮೊದಲ ಅರ್ಹತೆಯನ್ನು (ಕ್ವೋಟಾ) ಪಡೆದು ಇತಿಹಾಸ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯಲಿರುವ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಕೂಟವು ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಬಯಸುವ ಕ್ರೀಡಾಪಟುಗಳಿಗೆ ಅತ್ಯಂತ ಪ್ರಮುಖ ಅರ್ಹತಾ ವೇದಿಕೆಯಾಗಲಿದೆ. 

ಕಳೆದ ಏಪ್ರಿಲ್‌ನಲ್ಲಿ ನಡೆದ ‘ಲಿಟಲ್ ಅಂಡಮಾನ್ ಪ್ರೊ 2026’ ನಂತರ, ಇದು ಈ ವರ್ಷದ ರಾಷ್ಟ್ರೀಯ ಚಾಂಪಿಯನ್‌ಶಿಪ್ ಸರಣಿಯ ಎರಡನೇ ಪ್ರಮುಖ ನಿಲ್ದಾಣವಾಗಿದೆ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಅಗ್ರಗಣ್ಯ ಸರ್ಫರ್‌ಗಳ ನಡುವೆ ಇಲ್ಲಿ ತೀವ್ರ ಪೈಪೋಟಿ ನಡೆಯಲಿದ್ದು, ಸೀಸನ್‌ನ ಅಂತಿಮ ರ‍್ಯಾಂಕಿಂಗ್ ನಿರ್ಧರಿಸಲು ಈ ಪಾಯಿಂಟ್‌ಗಳು ಪ್ರಮುಖವಾಗಲಿವೆ.

ಕಾರ್ಯಕ್ರಮದ ಅಂಗವಾಗಿ ಸೋಮವಾರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ​ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಮಾತನಾಡಿ,‌ ಕರ್ನಾಟಕವು ಸರ್ಫಿಂಗ್ ಮತ್ತು ಕರಾವಳಿ ಕ್ರೀಡೆಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ಬೆಳೆಯುತ್ತಿದೆ. ಈ ಕ್ರೀಡಾಕೂಟವು ಕರಾವಳಿಯ ಪ್ರವಾಸೋದ್ಯಮ ಹಾಗೂ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡಲು ಉತ್ತಮ ಅವಕಾಶವಾಗಿದೆ ಎಂದರು.

​ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್‌ನ ಶಮಂತ್, ಏಷ್ಯನ್ ಗೇಮ್ಸ್ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಂದು ರಾಷ್ಟ್ರೀಯ ಸ್ಪರ್ಧೆಯೂ ನಮ್ಮ ಅಥ್ಲೀಟ್‌ಗಳಿಗೆ ಅಂತಾರಾಷ್ಟ್ರೀಯ ಸವಾಲುಗಳನ್ನು ಎದುರಿಸಲು ತರಬೇತಿಯಂತಾಗಲಿದ್ದು, ಇದು ಅತ್ಯಂತ ನಿರ್ಣಾಯಕ ಸಮಯವಾಗಿದೆ ಎಂದರು.

​ಸರ್ಫಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ್ ಶೆಟ್ಟಿ ಮಾತನಾಡಿ, ಏಷ್ಯನ್ ಮಟ್ಟದಲ್ಲಿ ಭಾರತೀಯ ಸರ್ಫರ್‌ಗಳ ಬೆಳವಣಿಗೆ ಹೆಮ್ಮೆ ತರುವಂತದ್ದಾಗಿದ್ದು, ಇಂತಹ ಸ್ಪರ್ಧೆಗಳು ಬಲಿಷ್ಠ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಕಾರಿಯಾಗಲಿವೆ ಎಂದರು
​ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ನರವಾಡೆ ವಿನಾಯಕ್ ಕಾರ್ಭಾರಿ, ಮಂಗಳೂರು ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ಕುಮಾರಿ ಮೀನಾಕ್ಷಿ ಆರ್ಯ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಹಾಗೂ ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್ ಉಪಸ್ಥಿತರಿದ್ದರು.

​ದೇಶದ ವಿವಿಧ ಭಾಗಗಳ ನೂರಾರು ಪ್ರತಿಭಾವಂತ ಸರ್ಫರ್‌ಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಕರಾವಳಿಯ ಅಲೆಗಳ ಮೇಲೆ ಜಿದ್ದಾಜಿದ್ದಿಗೆ ಇಳಿಯಲಿದ್ದು, ಮಂಗಳೂರಿನ ತಣ್ಣೀರುಭಾವಿ ಕಡಲತೀರ ಸಾಹಸ ಕ್ರೀಡೆಗೆ ಸಾಕ್ಷಿಯಾಗಲು ಸಜ್ಜಾಗಿದೆ.
Previous Post Next Post