​ಮಂಗಳೂರು: "ಟ್ಯಾಬ್ಲೆಟ್ ಆರಿಫ್" ಕೊಲೆ ಪ್ರಕರಣ; ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದ ಟೊಪ್ಪಿ ನೌಫಾಲ್ ಸಹೋದರ ಸಿನಾನ್ ಬಂಧನ

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಆರಿಫ್ ಹುಸೇನ್ ಅಲಿಯಾಸ್ "ಟ್ಯಾಬ್ಲೆಟ್ ಆರಿಫ್" ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದ ಆರೋಪದ ಮೇಲೆ ಟೋಪಿ ನೌಫಾಲ್ ಸಹೋದರ ಮೊಹಮ್ಮದ್ ಇಬ್ರಾಹಿಂ ಸಿನಾನ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಿನ್ನೆಲೆ: ​ಕಳೆದ ಮಾರ್ಚ್ 27 ರಂದು ತೋಕ್ಕೊಟ್ಟು ಫ್ಲೈ ಓವರ್ ಮೇಲಿಂದ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರಿಫ್‌ನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಕೃತ್ಯಕ್ಕೆ ಬಳಸಿದ್ದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

​ಆರೋಪಿಯ ಹಿನ್ನೆಲೆ ಮತ್ತು ತನಿಖೆ:
​ಪ್ರಸ್ತುತ ಬಂಧಿತನಾಗಿರುವ ಮಂಗಳೂರಿನ ಬಜಾಲ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಸಿನಾನ್ @ ಚಿನ್ನು (21) ಎಂಬಾತನ ವಿರುದ್ಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ.
​2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ,
​2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ.

​ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಸಿನಾನ್ 2026ರ ಫೆಬ್ರವರಿ ತಿಂಗಳಲ್ಲಿ ಆರಿಫ್ ಹುಸೇನ್ ಕೊಲೆ ಮಾಡಲು ಸಂಚು ರೂಪಿಸಿದ್ದ ತಂಡದಲ್ಲಿ ಸಕ್ರಿಯನಾಗಿದ್ದ. ಅಲ್ಲದೆ, ಕೊಲೆಯ ನಂತರ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ಬೆಳಕಿಗೆ ಬಂದಿದೆ. ಈತ ಕಳೆದ ನವೆಂಬರ್‌ನಲ್ಲಿ ಉಳ್ಳಾಲದಲ್ಲಿ ಮೃತಪಟ್ಟಿದ್ದ ರೌಡಿಶೀಟರ್ "ಟೋಪಿ ನೌಫಾಲ್" ಎಂಬಾತನ ಸಹೋದರನಾಗಿದ್ದಾನೆ.

​ಈಗಾಗಲೇ ಹಲವರ ಬಂಧನ:
​ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ಮೊಹಮ್ಮದ್ ರಿಫಾತ್ ಅಲಿ, ಇಬ್ರಾಹಿಂ ಖಲೀಲ್, ಅಶ್ಫಾಕ್ @ ಜುಟ್ಟು ಅಶ್ಫಾಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ಮೊಹಮ್ಮದ್ ರಿಜ್ವಾನ್ @ ರಿಜ್ವಾನ್, ಮೊಹಮ್ಮದ್ ಇರ್ಷಾದ್ @ ಅಕುಡು, ಮಹಮ್ಮದ್ ಹರ್ಷಾದ್, ನಿಶಾಕ್ @ ಪುಚ್ಚೆ ನಿಶಾಕ್, ಬಿ. ಜುನ್ಯೆದ್ @ ಕೊಕ್ಕಡ ಜುನ್ಯೆದ್ ಹಾಗೂ ಮೊಹಮ್ಮದ್ ಸುಹೇಲ್ @ ಚಿಯಾ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಇವರ ವಿರುದ್ಧ "ಕೋಕಾ ಕಾಯ್ದೆ" ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
Previous Post Next Post