ನವದೆಹಲಿ: ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಮರ್ಪಕವಾಗಿ ಪರಿಗಣಿಸದಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಸೌಜನ್ಯ ತಾಯಿ ಕುಸುಮಾವತಿ ಪರ ವಕೀಲರು, ಪ್ರಕರಣದ ಪ್ರಮುಖ ಸಾಕ್ಷಿಗಳು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಸಾಕ್ಷಿಗಳಿಗೆ ತಕ್ಷಣ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಇದೇ ವೇಳೆ, ರಾಜ್ಯ ಸರ್ಕಾರ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಜುಲೈ 14ರೊಳಗೆ ತಮ್ಮ ಪ್ರತಿಜ್ಞಾಪತ್ರ (ಕೌಂಟರ್ ಅಫಿಡವಿಟ್) ಸಲ್ಲಿಸುವಂತೆ ಕೋರ್ಟ್ ನಿರ್ದೇಶಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರ ಹಾಗೂ ಸಿಬಿಐ ಪರ ವಕೀಲರು ಗೈರಾಗಿದ್ದುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಮಧ್ಯಾಹ್ನದ ಅಧಿವೇಶನದಲ್ಲಿಯೂ ಸ್ಪಷ್ಟ ನಿಲುವು ತಿಳಿಸಲಿಲ್ಲವೆಂಬ ಕಾರಣಕ್ಕೆ, ಮರುತನಿಖೆಯನ್ನು ಯಾವ ಸಂಸ್ಥೆ ನಡೆಸಬೇಕು ಎಂಬುದನ್ನು ಎರಡು ವಾರಗಳೊಳಗೆ ತಿಳಿಸಲು ನ್ಯಾಯಾಲಯ ಆದೇಶಿಸಿದೆ.
Tags
ರಾಜ್ಯ