ಸುಳ್ಯ : ಸಾಲವಾಗಿ ಪಡೆದ ಹಣ ಹಿಂತಿರುಗಿಸುವ ನೆಪದಲ್ಲಿ ಮನೆಗೆ ಬಂದ ಮಹಿಳೆ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿತೆಯೊಂದಿಗೆ ಸಹಚರನನ್ನೂ ಬಂಧಿಸಿದ್ದಾರೆ.
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ (20) ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಅವರ ತಂದೆಗೆ ಶೃತಿ @ ವಿಶ್ಮೀತ (37) ಎಂಬಾಕೆಯ ಪರಿಚಯವಿದ್ದು, ಆಕೆಗೆ ಸುಮಾರು 6 ಲಕ್ಷ ರೂ. ಹಣವನ್ನು ಸಾಲವಾಗಿ ನೀಡಲಾಗಿತ್ತು.
ಈ ಹಣವನ್ನು ಹಿಂತಿರುಗಿಸುವಂತೆ ಪುಣ್ಯಶ್ರೀ ಕೇಳಿದ ಹಿನ್ನೆಲೆ, ಆರೋಪಿತೆ ಶೃತಿ ಏ.7ರಂದು ಅವರ ಮನೆಗೆ ಬಂದಿದ್ದಾಳೆ. ಬಳಿಕ ಮನೆವರು ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆ ಕಪಾಟಿನ ಕೀಲಿಯನ್ನು ಬಳಸಿಕೊಂಡು ಒಳನುಗ್ಗಿ, ಅಂದಾಜು 5 ಲಕ್ಷ ರೂ. ಮೌಲ್ಯದ 62.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ಪತ್ತೆಯಾಗಿದೆ.
ಘಟನೆಯ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು ಶೃತಿ @ ವಿಶ್ಮೀತ ಮತ್ತು ಆಕೆಗೆ ಸಹಾಯ ಮಾಡಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಕಳವಾದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
Tags
ಅಪರಾಧ