ಮಂಗಳೂರು: ಪ್ರೀತಿ ಬದುಕಿಗೆ ದಾರಿಯಾಗಬೇಕಾದರೆ, ಇಲ್ಲೊಬ್ಬ ಯುವಕನ ಪಾಲಿಗೆ ಅದೇ ಪ್ರೀತಿ ಮರಣಶಾಸನವಾಗಿರುವ ದುರ್ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರೀತಿಸಿದ ಯುವತಿಯ ಮಾನಸಿಕ ಕಿರುಕುಳ ತಾಳಲಾರದೆ 22 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಮೂಡುಶೆಡ್ಡೆಯ ಎದುರುಪದವು ನಿವಾಸಿ ಮುಹಮ್ಮದ್ ಆಶಿಕ್ (22) ಅವರು ಕಳೆದ ಮಾರ್ಚ್ 21ರ ಮಧ್ಯರಾತ್ರಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಸಾವಿನ ನಿಖರ ಕಾರಣ ತಿಳಿದಿರಲಿಲ್ಲ. ಆದರೆ ನಂತರ ಆಶಿಕ್‌ನ ಮೊಬೈಲ್ ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.
ಆಶಿಕ್ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ಉಳ್ಳಾಲ ನಿವಾಸಿ ಸಮೀಯ ಸಬಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಆತ್ಮೀಯ ಸಂಬಂಧವಿದ್ದರೂ, ಇತ್ತೀಚಿನ ದಿನಗಳಲ್ಲಿ ಸಬಾ ಆಶಿಕ್‌ನಿಂದ ದೂರವಾಗತೊಡಗಿದ್ದಳು ಎನ್ನಲಾಗಿದೆ. ಅಲ್ಲದೆ, ಆತನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಆಶಿಕ್ ತಂದೆ ಮುಹಮ್ಮದ್ ಹನೀಫ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನೀನು ಎಲ್ಲಿಯಾದರೂ ಹೋಗಿ ಸಾಯಿ” ಎಂದು ಹೇಳುವುದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕ್ಷಣದಲ್ಲೂ ಸಬಾ ವೀಡಿಯೋ ಕಾಲ್‌ನಲ್ಲಿ ಇದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಪ್ರೀತಿಯ ನಾಟಕವಾಡಿ ಹಣ ಖರ್ಚು ಮಾಡಿಸಿ, ಕೊನೆಗೆ ಮಗನನ್ನು ಸಾವಿನತ್ತ ದೂಡಿದ್ದಾಳೆ ಎಂದು ಆಶಿಕ್ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಶಿಕ್ ಆಕೆಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಸದ್ಯ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವೀಡಿಯೋ ಕಾಲ್ ದಾಖಲೆಗಳು ಹಾಗೂ ಮೊಬೈಲ್ ಚಾಟ್‌ಗಳನ್ನು ಪರಿಶೀಲಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Tags
ಅಪರಾಧ