ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ.80.1 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿ ಗಮನ ಸೆಳೆದಿದ್ದಾನೆ.
ಬೆಂಗಳೂರು ಮೂಲದ ಎಸ್.ಅಶೋಕ್ ಕುಮಾರ್ ಕಳೆದ ಏಳು ವರ್ಷಗಳಿಂದ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ವಿದ್ಯಾಭ್ಯಾಸದ ಮೇಲೆ ಅಪಾರ ಆಸಕ್ತಿ ಹೊಂದಿದ್ದಾನೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ದೂರ ಶಿಕ್ಷಣದ ಮೂಲಕ ನೋಂದಣಿ ಮಾಡಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದರು.
ಅಶೋಕ್ ಕುಮಾರ್ ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 84 ಹಾಗೂ ಕನ್ನಡದಲ್ಲಿ 82 ಅಂಕಗಳನ್ನು ಪಡೆದು ಒಟ್ಟು ಶೇ.80.1 ಅಂಕಗಳೊಂದಿಗೆ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಜೈಲು ಸೆಲ್‌ನಲ್ಲೇ ಓದುವ ಅಭ್ಯಾಸ ಬೆಳೆಸಿಕೊಂಡು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಪದವಿ ಶಿಕ್ಷಣ ಮುಂದುವರಿಸಲು ಆಸಕ್ತಿ ತೋರಿದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಡಿಜಿಪಿ ಅಲೋಕ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಜೀವಾವಧಿ ಶಿಕ್ಷೆಯಲ್ಲಿದ್ದರೂ ಶಿಕ್ಷಣದ ಮೂಲಕ ಉತ್ತಮ ಭವಿಷ್ಯದತ್ತ ಹೆಜ್ಜೆ ಇಟ್ಟಿರುವುದು ಪ್ರೇರಣಾದಾಯಕ. ಜೈಲಿನ ಗೋಡೆಗಳು ಅವರ ಆಶೆಯನ್ನು ಕುಗ್ಗಿಸಿಲ್ಲ” ಎಂದು ಪ್ರಶಂಸಿಸಿದ್ದಾರೆ.