ಮಂಗಳೂರು : ಮೇ.1ರಿಂದ ನೀರು ಪೂರೈಕೆಯಲ್ಲಿ ರೇಶನಿಂಗ್ ಆರಂಭ ; ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ : ಡಿಸಿ

ಮಂಗಳೂರು: ತುಂಬೆ ಕಿಂಡಿ ಅಣೆಕಟ್ಟು ಹಾಗೂ ಎಎಂಆರ್ ಡ್ಯಾಂಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಜೂನ್ 10ರವರೆಗೆ ನೀರು ಪೂರೈಕೆಗೆ ಸಾಕಾಗುವಷ್ಟು ಸಂಗ್ರಹವಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಮನಪಾ ಆಡಳಿತಾಧಿಕಾರಿ ದರ್ಶನ್ ಎಚ್‌.ವಿ. ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿರುವುದರಿಂದ ಸುರತ್ಕಲ್ ಸೇರಿದಂತೆ ಕೆಲವು ಪ್ರದೇಶಗಳಿಗೆ ಸಮರ್ಪಕ ಪೂರೈಕೆ ಮಾಡಲು ಮೇ 1ರಿಂದ ನೀರು ರೇಶನಿಂಗ್ ಜಾರಿಗೆ ತರಲಾಗುವುದು ಎಂದು ಹೇಳಿದರು.
ಪ್ರಸ್ತುತ ತುಂಬೆಯಿಂದ ದಿನಕ್ಕೆ 160 ಎಂಎಲ್‌ಡಿ ನೀರು ಪಂಪಿಂಗ್ ನಡೆಯುತ್ತಿದ್ದು, ಇದೇ ಪ್ರಮಾಣ ಮುಂದುವರಿಯಲಿದೆ. ಆದರೆ ಕೆಲವು ಪ್ರದೇಶಗಳಿಗೆ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ನೀರು ಪೂರೈಕೆ ಮಾಡಲಾಗುವುದು. 

ಇದರಿಂದ ಪಾಲಿಕೆಯ 60 ವಾರ್ಡ್‌ಗಳಿಗೆ ಕನಿಷ್ಠ ಎರಡು ದಿನಗಳಿಗೊಮ್ಮೆ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಎಪ್ರಿಲ್ 24ರ ಸ್ಥಿತಿಗತಿಗಳ ಪ್ರಕಾರ, ತುಂಬೆ ಅಣೆಕಟ್ಟಿನಲ್ಲಿ 4.53 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 18.53 ಮೀಟರ್ ನೀರಿನ ಮಟ್ಟವಿದೆ. ಈವರೆಗೆ ಎಎಂಆರ್ ಡ್ಯಾಂನಿಂದ ತುಂಬೆಗೆ ನೀರು ಹರಿಸಿಲ್ಲ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಆಗುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಣೆಕಟ್ಟುಗಳಿಗೆ ಒಳಹರಿವು ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Post a Comment

Previous Post Next Post