Top News

ದೇಶದಾದ್ಯಂತ LPG ಪೂರೈಕೆ ಭದ್ರತೆಗೆ ESMA ಜಾರಿಗೊಳಿಸಿದ ಸರಕಾರ ; ಗ್ಯಾಸ್ ಪೂರೈಕೆ ವತ್ಯಯವಾದರೆ ಜೈಲು ಶಿಕ್ಷೆ !

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ದೇಶದ ಇಂಧನ ಭದ್ರತೆ ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಡುಗೆ ಅನಿಲ (LPG) ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ದೇಶಾದ್ಯಂತ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ–1968 (ESMA) ಅನ್ನು ಜಾರಿಗೆ ತಂದಿದೆ.

ಇದರ ಜೊತೆಗೆ ರಿಫೈನರಿ ಹಾಗೂ ಪೆಟ್ರೋಕೆಮಿಕಲ್ ಕಂಪನಿಗಳಿಗೆ ಗರಿಷ್ಠ ಮಟ್ಟದಲ್ಲಿ ಎಲ್‌ಪಿಜಿ ಉತ್ಪಾದನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಹೈಡ್ರೋಕಾರ್ಬನ್ ಉತ್ಪಾದನಾ ಘಟಕಗಳನ್ನು ಕೂಡ ಎಲ್‌ಪಿಜಿ ಉತ್ಪಾದನೆಗೆ ತಿರುಗಿಸಲು ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಜೊತೆಗೆ ಅಗತ್ಯ ವಸ್ತುಗಳ ಕಾಯ್ದೆ–1955 ಅನ್ನು ಸಹ ಜಾರಿಗೊಳಿಸಲಾಗಿದೆ.

ಏನಿದು ESMA ಕಾಯ್ದೆ? :
1968ರಲ್ಲಿ ಸಂಸತ್ತು ಅಂಗೀಕರಿಸಿದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA) ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಸೇವೆಗಳು ನಿರಂತರವಾಗಿ ನಡೆಯುವಂತೆ ಸರ್ಕಾರಕ್ಕೆ ವಿಶೇಷ ಅಧಿಕಾರ ನೀಡುತ್ತದೆ.

ಜನಸಾಮಾನ್ಯರ ದೈನಂದಿನ ಬದುಕಿಗೆ ತೊಂದರೆ ಉಂಟಾಗುವ ಪರಿಸ್ಥಿತಿಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ.
ESMA ವ್ಯಾಪ್ತಿಗೆ ಬರುವ ಪ್ರಮುಖ ಸೇವೆಗಳು
ಸಾರ್ವಜನಿಕ ಸಾರಿಗೆ ಸೇವೆಗಳು (ಬಸ್, ರೈಲು)
ಆರೋಗ್ಯ ಸೇವೆಗಳು (ವೈದ್ಯರು, ನರ್ಸ್‌ಗಳು, ಆಸ್ಪತ್ರೆಗಳು)
ನೀರು ಸರಬರಾಜು, ನೈರ್ಮಲ್ಯ ಮತ್ತು ವಿದ್ಯುತ್
ಪೆಟ್ರೋಲಿಯಂ, ಕಲ್ಲಿದ್ದಲು, ಉಕ್ಕು ಹಾಗೂ ರಸಗೊಬ್ಬರ ಉತ್ಪಾದನೆ ಮತ್ತು ವಿತರಣೆ
ಬ್ಯಾಂಕಿಂಗ್ ಸೇವೆಗಳು ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆ
ನಿಯಮ ಉಲ್ಲಂಘಿಸಿದರೆ ಶಿಕ್ಷೆ
ESMA ಜಾರಿಯಾದ ನಂತರ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಮುಷ್ಕರ ನಡೆಸಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಪೊಲೀಸ್ ಅಧಿಕಾರಿಗಳು ವಾರೆಂಟ್ ಇಲ್ಲದೆ ಬಂಧಿಸುವ ಅಧಿಕಾರ ಹೊಂದಿರುತ್ತಾರೆ.
ತಪ್ಪಿತಸ್ಥರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು.
ಮುಷ್ಕರಕ್ಕೆ ಪ್ರಚೋದಿಸಿದ ಅಥವಾ ಭಾಗವಹಿಸಿದ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಅಧಿಕಾರವೂ ಸರ್ಕಾರಕ್ಕಿದೆ.

ಈ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ಸಾಮಾನ್ಯವಾಗಿ ಗರಿಷ್ಠ ಆರು ತಿಂಗಳವರೆಗೆ ಅದು ಜಾರಿಯಲ್ಲಿ ಇರುತ್ತದೆ.
ಅಗತ್ಯ ವಸ್ತುಗಳ ಕಾಯ್ದೆ–1955
ಈ ಕಾಯ್ದೆಯ ಮೂಲಕ ಸರ್ಕಾರವು ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಹಾಗೂ ವಿತರಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಕಾಳಸಂತೆ ಹಾಗೂ ಅಕ್ರಮ ದಾಸ್ತಾನುಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಔಷಧಿಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಬೀಜಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಯುದ್ಧ ಅಥವಾ ಪ್ರಕೃತಿ ವಿಕೋಪದಂತಹ ಅಸಾಮಾನ್ಯ ಪರಿಸ್ಥಿತಿಗಳಲ್ಲಿ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.

Post a Comment

Previous Post Next Post