Top News

ಬಂಟ್ವಾಳದಲ್ಲಿ 17.97ಗ್ರಾಂ MDMA ಮಾದಕ ವಸ್ತು ಪತ್ತೆ: ನಾಲ್ವರು ಆರೋಪಿಗಳ ಬಂಧನ

ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನೇರಳಕಟ್ಟೆ ಇಂದಿರಾ ನಗರ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 17.97 ಗ್ರಾಂ ತೂಕದ, ರೂ.1,79,700 ಮೌಲ್ಯದ MDMA ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಶ್ರಫ್ ಜಿ (38) ಎಂಬಾತನು ತನ್ನ ಮನೆಯಲ್ಲಿ MDMA ಮಾದಕ ವಸ್ತುವನ್ನು ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ (ತನಿಖೆ–1) ರತ್ನಕುಮಾರ್ ಎಂ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.

ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಪ್ರದೇಶದಲ್ಲಿರುವ ಅಶ್ರಫ್ ಜಿ ಅವರ ನಿವಾಸಕ್ಕೆ ತೆರಳಿದ ವೇಳೆ, ಅಶ್ರಫ್ ಜೊತೆಗೆ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಹಾಗೂ ಅಶ್ರಫ್ ಎನ್.ಎ ಎಂಬವರು ಮನೆಯಲ್ಲಿದ್ದರೆಂದು ತಿಳಿದುಬಂದಿದೆ. ಮನೆ ಪರಿಶೀಲನೆ ನಡೆಸಿದಾಗ 17.97 ಗ್ರಾಂ ತೂಕದ MDMA ಮಾದಕ ವಸ್ತು, ಚೂರಿ ಸೇರಿದಂತೆ ಕೆಲವು ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2026 ದಾಖಲಿಸಲಾಗಿದ್ದು, NDPS ಕಾಯ್ದೆ 1985ರ ಕಲಂ 8(C), 22(C) ಹಾಗೂ ಆರ್ಮ್ಸ್ ಆಕ್ಟ್‌ನ ಕಲಂ 27ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Post a Comment

Previous Post Next Post