ನವದೆಹಲಿ: ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಷ್ಟೇ ನಡೆಸಬೇಕು, ರಾಜ್ಯದ ಇತರ ಭಾಗಗಳಲ್ಲಿ ಆಯೋಜಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.10) ತಿರಸ್ಕರಿಸಿದೆ.
“ಒಂದು ಪ್ರದೇಶದ ಸಂಸ್ಕೃತಿಯನ್ನು ರಾಜ್ಯದ ಇತರ ಭಾಗಗಳ ಜನರಿಗೆ ಪರಿಚಯಿಸುವುದರಲ್ಲಿ ತಪ್ಪೇನು ಇದೆ? ಅದನ್ನು ಏಕೆ ಕೇವಲ ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು?” ಎಂದು ನ್ಯಾಯಾಲಯವು ಅರ್ಜಿದಾರರನ್ನು ಪ್ರಶ್ನಿಸಿತು.
ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಘಟನೆ ಪೇಟಾ (PETA) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಪೇಟಾ ಪರ ವಕೀಲರು, “ಕಂಬಳವು ಕರಾವಳಿ ಪ್ರದೇಶದ ಸಂಪ್ರದಾಯವಾಗಿದ್ದು, ಬೆಂಗಳೂರಿನ ಸಂಸ್ಕೃತಿಗೆ ಇದಕ್ಕೆ ಸಂಬಂಧವಿಲ್ಲ” ಎಂದು ವಾದ ಮಂಡಿಸಿದ್ದರು.
ಆದರೆ ಈ ವಾದವನ್ನು ತಳ್ಳಿ ಹಾಕಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠ, ಸಾಂಸ್ಕೃತಿಕ ಪರಂಪರೆ ರಾಜ್ಯದ ಎಲ್ಲೆಡೆ ಹರಡುವುದು ಸಹಜ ಎಂದು ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ನ್ಯಾಯಮೂರ್ತಿ ಮೆಹ್ರಾ, “ರಾಜ್ಯದ ಬೇರೆ ಭಾಗದ ಜನರೂ ಈ ಕ್ರೀಡೆ ಮತ್ತು ಅದರ ಸಂಸ್ಕೃತಿಯ ಮಹತ್ವವನ್ನು ತಿಳಿದುಕೊಳ್ಳಲಿ. ಇದಕ್ಕೆ ಅಡ್ಡಿಯಾಗುವ ಅಗತ್ಯವಿಲ್ಲ” ಎಂದು ಹೇಳಿದರು.
ಇದಕ್ಕೆ ಜೊತೆಗೆ, ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಪೀಠವು ಪೇಟಾ ಸಂಘಟನೆಯನ್ನೇ ಉದ್ದೇಶಿಸಿ, “ಮುಂದಿನ ದಿನಗಳಲ್ಲಿ ನಾವು ಪೇಟಾ ಸಂಘಟನೆಗೂ ಕೆಲವು ಪ್ರಶ್ನೆಗಳು ಕೇಳಬೇಕಾಗುತ್ತದೆ” ಎಂದು ಸೂಚನಾತ್ಮಕವಾಗಿ ಹೇಳಿತು.
Post a Comment