Top News

ಅಫ್ಘಾನಿಸ್ತಾನದ ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ; 400ಕ್ಕೂ ಅಧಿಕ ಸಾ*ವು, 250ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಪುನರ್ವಸತಿ ಕೇಂದ್ರ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ವಾಯುದಾಳಿ ನಡೆದಿರುವುದಾಗಿ ಅಫ್ಘಾನ್ ಸರ್ಕಾರ ಆರೋಪಿಸಿದೆ. 

ಈ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಫಿತ್ರತ್, “ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಿಂದ ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಕಾಬೂಲ್ ಮೇಲೆ ನಡೆದ ದಾಳಿಯಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಲಾಗಿಲ್ಲ, ಈ ಆರೋಪಗಳು ಸುಳ್ಳು ಹಾಗೂ ದಾರಿ ತಪ್ಪಿಸುವಂತಿವೆ ಎಂದು ಪಾಕ್ ಮಾಹಿತಿ ಸಚಿವಾಲಯ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ದಾಳಿಯನ್ನು ಖಂಡಿಸಿರುವ ಅಫ್ಘಾನಿಸ್ತಾನದ ಸಚಿವರು, ಘಟನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಗಡಿಭಾಗದಲ್ಲಿ ಉದ್ಭವಿಸಿದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ.

ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಸುಮಾರು 2,000 ಹಾಸಿಗೆಗಳ ಸಾಮರ್ಥ್ಯದ ಈ ಬೃಹತ್ ಆಸ್ಪತ್ರೆಯ ಮೇಲೆ ರಾತ್ರಿ 9 ಗಂಟೆಗೆ ಬಾಂಬ್ ದಾಳಿ ನಡೆದಿದೆ. ಆಸ್ಪತ್ರೆಯ ಬಹುತೇಕ ಭಾಗ ಧ್ವಂಸಗೊಂಡಿದೆ. ಮೃತಪಟ್ಟ 400 ಜನರಲ್ಲಿ ಹೆಚ್ಚಿನವರು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಾಗಿದ್ದಾರೆ. 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ವಕ್ತಾರ ಹಮ್ದುಲ್ಲಾ ಫಿತ್ರಾತ್ ಹೇಳಿದ್ದಾರೆ.

Post a Comment

Previous Post Next Post