ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಲಾಪವನ್ನು ಸಮಯ ಸೂಚನೆ ಇಲ್ಲದೆ ಮುಂದೂಡಿದ ಘಟನೆ ನಡೆದಿದೆ.
ಕಲಾಪದ ವೇಳೆ ಸಚಿವರಿಂದ ನಿರೀಕ್ಷಿತ ಉತ್ತರ ದೊರೆಯದ ಹಿನ್ನೆಲೆ ಗರಂ ಆದ ಸ್ಪೀಕರ್ ಖಾದರ್, ಉತ್ತರ ನೀಡದಿರುವುದಕ್ಕೆ ಸ್ಪಷ್ಟ ಕಾರಣ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿ ಪೀಠದಿಂದ ನಿರ್ಗಮಿಸಿದರು. ಲಿಖಿತ ರೂಪದಲ್ಲಿ ಕೇಳಲಾದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳ ಉತ್ತರ ಮಂಡನೆಯ ಸಂದರ್ಭ ಈ ಘಟನೆ ನಡೆದಿದೆ.
ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರ ನೀಡುವ ವೇಳೆ ವಿಪಕ್ಷ ಸದಸ್ಯರು ತೀವ್ರ ಟೀಕೆ ವ್ಯಕ್ತಪಡಿಸಿದರು. ಕಲಾಪ ಆರಂಭದಿಂದಲೇ ಸಚಿವರಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದ ವಿಪಕ್ಷ ನಾಯಕ ಅಶೋಕ್, ಸರ್ಕಾರದ ಕಾರ್ಯವೈಖರಿ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಸ್ಪೀಕರ್ ಖಾದರ್ ಕೂಡ ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿ, ಸದನದಲ್ಲಿ ಎಲ್ಲಾ ಶಾಸಕರಿಗೂ ತಮ್ಮ ಪ್ರಶ್ನೆಗಳ ಉತ್ತರ ಪಡೆಯುವ ಹಕ್ಕಿದೆ. ಚುಕ್ಕೆ ಗುರುತಿನ ಪ್ರಶ್ನೆಗಳಷ್ಟೇ ಅಲ್ಲದೆ ಗಮನ ಸೆಳೆಯುವ ಸೂಚನೆಗೂ ಉತ್ತರ ನೀಡಬೇಕು. ಹಲವು ಬಾರಿ ಸೂಚನೆ ನೀಡಿದರೂ ಸುಧಾರಣೆ ಕಾಣುತ್ತಿಲ್ಲ ಎಂದು ಹೇಳಿದರು.
ಸಂಬಂಧಿತ ಸಚಿವರು ಸ್ಪಷ್ಟನೆ ನೀಡುವವರೆಗೆ ಸದನ ನಡೆಸುವುದಿಲ್ಲ ಎಂದು ಖಡಕ್ ನಿಲುವು ತಾಳಿದ ಸ್ಪೀಕರ್ ಕ್ರಮಕ್ಕೆ ಆಡಳಿತ ಪಕ್ಷಕ್ಕೆ ಬಿಸಿ ತಟ್ಟಿದರೆ, ವಿಪಕ್ಷದಿಂದಲೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Post a Comment