ಶಿರಾಡಿ ಘಾಟಿಯಲ್ಲಿ ಭೀಕರ ರಸ್ತೆ ಅಪಘಾತ: ರಾಜಹಂಸ ಬಸ್–ಕಾರು ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಶಿರಾಡಿ ಘಾಟಿಯ ಗುಂಡ್ಯ ಸಮೀಪದ ಬರ್ಚಿನಹಳ್ಳಿ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನದಲ್ಲಿ ನಡೆದ ಮದುವೆ ಸಮಾರಂಭಕ್ಕೆ ತೆರಳಿ ಉಜಿರೆ ಕಡೆಗೆ ಮರಳುತ್ತಿದ್ದ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ತೆರಳುತ್ತಿದ್ದ ರಾಜಹಂಸ ಬಸ್ ನಡುವೆ ಬರ್ಚಿನಹಳ್ಳಿ ಸಮೀಪ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಕೊಕ್ಕಡದಲ್ಲಿ ಎಸ್.ಆರ್. ಕೊಬ್ಬರಿ ಮಿಲ್ ನಡೆಸುತ್ತಿದ್ದ ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ (56), ಉಜಿರೆ ಗ್ರಾಮದ ಮರಕಡ ನಿವಾಸಿ ಹಾಗೂ ಕಕ್ಕಿಂಜೆ ಮಲ್ನಾಡ್ ಫೈನಾನ್ಸ್ ಮಾಲಕರಾದ ಶ್ರೀಧರ (61) (ಕಾರು ಚಾಲಕ) ಮತ್ತು ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಉಮೇಶ್ (54) ಎಂದು ಗುರುತಿಸಲಾಗಿದೆ.
ಇನ್ನೊಬ್ಬರಾದ ಉಜಿರೆ ಗ್ರಾಮದ ಕೂಡಿಗೆ ನಿವಾಸಿ ಸುರೇಶ್ (60) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪ್ರಕರಣ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Previous Post Next Post