Top News

ಜನವರಿ 11ರಂದು ಜಗದ್ಗುರು ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಮಂಗಳೋತ್ಸವ ; ಮಂಗಳೂರಿನಲ್ಲಿ ಭವ್ಯ ಕಾರ್ಯಕ್ರಮ

ಮಂಗಳೂರು:ಜಗದ್ಗುರು ಪರಮಪೂಜ್ಯ ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಮಂಗಳೋತ್ಸವವನ್ನು ಜನವರಿ 11ರಂದು ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾದೀಶರಾದ ಪರಮಪೂಜ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭವ್ಯವಾಗಿ ಆಚರಿಸಲಾಗುತ್ತಿದೆ. ಸಹಸ್ರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶೀಮಠದ 20ನೇ ಪೀಠಾಧೀಪತಿಗಳಾಗಿದ್ದ ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಸುಮಾರು 70 ವರ್ಷಗಳ ಕಾಲ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ಸಲ್ಲಿಸಿ, ಮನೆಮನೆಗಳಲ್ಲಿ ಭಜನೆಯ ಮೂಲಕ ಭಕ್ತಿಮಾರ್ಗವನ್ನು ಜನಮಾನಸಕ್ಕೆ ತಲುಪಿಸಿದ ಮಹಾನುಭಾವರು ಎಂದರು.
ಶ್ರೀಗಳ ಜನ್ಮಶತಮಾನೋತ್ಸವದ ಅಂಗವಾಗಿ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಫರ್‌ಘರ್ ಭಜನೆ, ಗುರುಗುಣಗಾನ, ವ್ಯಾಸೋಪಾಸನೆ ಹಾಗೂ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿವೆ.

ಪರಿಸರ ಸಂರಕ್ಷಣೆಯ ಸಂಕೇತವಾಗಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿದ್ವಾರದಲ್ಲಿ ಒಟ್ಟು ಸುಮಾರು 65 ಸಾವಿರ ಫಲ ನೀಡುವ ಗಿಡಗಳನ್ನು ವಿತರಿಸಿ ನೆಡಲಾಗಿದೆ ಎಂದು ವಿವರಿಸಿದರು.
ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಬಡ್ತಿಯಿಂದ ರಾಮೇಶ್ವರ ಹಾಗೂ ತಿರುವನಂತಪುರದವರೆಗೆ ಸಂಚರಿಸಿ ಇದೀಗ ಮಂಗಳೂರಿಗೆ ಆಗಮಿಸಿದೆ. ಜನವರಿ 11ರಂದು ಮಧ್ಯಾಹ್ನ 3.30ಕ್ಕೆ ಕೊಂಚಾಡಿ ಕಾಶೀಮಠದಿಂದ ಭಜನಾ ಸಂಕೀರ್ತನಾ ಪಾದಯಾತ್ರೆ ಆರಂಭಗೊಂಡು ನಗರದ ಪ್ರಮುಖ ರಸ್ತೆಗಳ ಮೂಲಕ ಶ್ರೀ ವೆಂಕಟರಮಣ ದೇವಸ್ಥಾನವನ್ನು ತಲುಪಲಿದೆ. ರಾತ್ರಿ 8.30ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಚನ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಪಾರ್ಕಿಂಗ್ ವ್ಯವಸ್ಥೆಗಳ ವಿವರ ನೀಡಿದರು. ಕೊಂಚಾಡಿಯಿಂದ ಆರಂಭಗೊಳ್ಳುವ ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು ಕೊಂಚಾಡಿ ಕಾಶೀಮಠದ ಸಮೀಪದಲ್ಲಿರುವ ಕೆನರಾ ವಿಕಾಸ್ ಕಾಲೇಜಿನ ಮೈದಾನದಲ್ಲಿ ನಿಲ್ಲಿಸಬೇಕು. ಕೊಂಚಾಡಿ ಕಾಶೀಮಠದ ಬಳಿ ಪ್ರಯಾಣಿಕರನ್ನು ಇಳಿಸಿ, ಹಂಪನಕಟ್ಟೆಯ ಬಳಿಯಿಂದ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆ ಮೂಲಕ ಎಲೋಶಿಯಸ್ ಕಾಲೇಜಿನ ಗೇಟ್ ನಂಬರ್ 1 ಹಾಗೂ ಗೇಟ್ ಸಿ ಒಳಗೆ ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ.
ಕಾರ್ಗಳಿಗಾಗಿ ಕೊಡಿಯಾಲ್ ಬೈಲ್‌ನ ಎಸ್‌ಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಎಲೋಶಿಯಸ್ ಕಾಲೇಜಿನ ಗೇಟ್ ಮೂಲಕ ಪ್ರವೇಶಿಸಿ ಮೊಯಲಾ ಸಭಾಂಗಣದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೊಡಿಯಾಲ್ ಬೈಲ್‌ನಲ್ಲಿರುವ ಬೆಸೆಂಟ್ ಕಾಲೇಜಿನಲ್ಲಿಯೂ ಪಾರ್ಕಿಂಗ್ ಸೌಲಭ್ಯ ಲಭ್ಯವಿದೆ. ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ರಾತ್ರಿ 10 ಗಂಟೆಯ ಬಳಿಕ ಸಿಟಿ ಪಾಯಿಂಟ್, ಪಾಸ್‌ಪೋರ್ಟ್ ಕಚೇರಿಯ ಸಮೀಪಕ್ಕೆ ಸ್ಥಳಾಂತರಿಸಲಾಗುವುದು. ಎಲೋಶಿಯಸ್ ಹಾಗೂ ಬೆಸೆಂಟ್ ಕಾಲೇಜಿನಲ್ಲಿ ಪಾರ್ಕಿಂಗ್ ಮಾಡಿದವರು ಅಲ್ಲಿಯೇ ತಮ್ಮ ವಾಹನಗಳ ಮೂಲಕ ವಾಪಸ್ ತೆರಳುವಂತೆ ಮನವಿ ಮಾಡಿದರು.
ರಾತ್ರಿ ಭೋಜನ ಪ್ರಸಾದ ವ್ಯವಸ್ಥೆ:
ಊರ ಹಾಗೂ ಪರವೂರಿನಿಂದ ಆಗಮಿಸುವ ಭಕ್ತರಿಗಾಗಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 8.30ರ ಬಳಿಕ ಮಹಾಮಾಯಾ ದೇವಸ್ಥಾನ, ಉಮಾಮಹೇಶ್ವರ ದೇವಸ್ಥಾನ ಹಾಗೂ ಭವಂತಿ ಸ್ಟ್ರೀಟ್‌ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್ ಕೇರ್ ಸೆಂಟರ್ ಸುತ್ತಮುತ್ತ ಭೋಜನ ಪ್ರಸಾದ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊತ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಮೊತ್ತೇಸರ ಸಿ.ಎ. ಜಗನ್ನಾಥ್ ಕಾಮತ್, ವಾಸುದೇವ್ ಕಾಮತ್, ರಘುವೀರ್ ಭಂಡಾರಕಾರ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Post a Comment

Previous Post Next Post