ಮಂಗಳೂರು: ಈ ಬಾರಿಯ ನುಡಿ ಹಬ್ಬ ‘ಮಂಗಳೂರು ಲಿಟ್ ಫೆಸ್ಟ್’ ಜನವರಿ 10 ಮತ್ತು 11ರಂದು ನಗರದ ಡಾ.ಟಿ.ಎಂ.ಏ ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. 2026ನೇ ಆವೃತ್ತಿಯ ವಿಶೇಷ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ, ಖ್ಯಾತ ಇತಿಹಾಸಕಾರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 10ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕ ಸಂಸ್ಥೆ ಭಾರತ್ ಫೌಂಡೇಷನ್ ಟ್ರಸ್ಟಿ ಸುನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಸಮಗ್ರ ಭಾರತದ ಪರಿಕಲ್ಪನೆಯನ್ನು ಸಾರುವ ಮಂಗಳೂರು ಲಿಟ್ ಫೆಸ್ಟ್ ಯಶಸ್ವಿಯಾಗಿ ಏಳು ಆವೃತ್ತಿಗಳನ್ನು ಪೂರೈಸಿದ್ದು, ಈ ಬಾರಿ ಎಂಟನೇ ಆವೃತ್ತಿಗೆ ಕಾಲಿಟ್ಟಿದೆ. ಜನವರಿ 10ರಂದು ಬೆಳಗ್ಗೆ ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದ್ದು, ಶತಾವಧಾನಿ ಡಾ. ಆರ್. ಗಣೇಶ್, ರಾಜ್ಯಸಭಾ ಸದಸ್ಯೆ ಮೀನಾಕ್ಷಿ ಜೈನ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಿಥಿಕ್ ಸೊಸೈಟಿಯ ರವಿ ಎಸ್. ಹಾಗೂ ಡಾ. ಅಜಕ್ಕಳ ಗಿರೀಶ್ ಭಟ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಈ ವರ್ಷದ ಲಿಟ್ ಫೆಸ್ಟ್ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಮೀನಾಕ್ಷಿ ಜೈನ್ ಅವರೊಂದಿಗೆ ವಿಶೇಷ ಸಂವಾದ ನಡೆಯಲಿದೆ.
ಇತ್ತೀಚೆಗೆ ನಿಧನರಾದ ಪದ್ಮಭೂಷಣ ಎಸ್. ಎಲ್. ಭೈರಪ್ಪ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ‘ಭೈರಪ್ಪ ಅವರ ಬೆಳಕಲ್ಲಿ ಮುಂದುವರೆಯಬಹುದಾದ ಸಾಹಿತ್ಯ’ ಎಂಬ ವಿಷಯದ ಕುರಿತು ಗೋಷ್ಠಿ ಆಯೋಜಿಸಲಾಗಿದ್ದು, ಶತಾವಧಾನಿ ಡಾ. ಆರ್. ಗಣೇಶ್ ಹಾಗೂ ಜಿ. ಬಿ. ಹರೀಶ್ ಗೋಷ್ಠಿ ನಡೆಸಿಕೊಡಲಿದ್ದಾರೆ.
ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿದ್ದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಅಂಬಾಸಿಡರ್ ಟಿ. ಎಸ್. ತಿರುಮೂರ್ತಿ ಸೇರಿದಂತೆ 65ಕ್ಕೂ ಹೆಚ್ಚು ಚಿಂತಕರು ಲಿಟ್ ಫೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ.
ವಿಕ್ರಂ ಸೂದ್ ಮತ್ತು ಡಾ. ಶ್ರೀಪರ್ಣಾ ಪಾರಕ್ ಅವರು ಜಾಗತಿಕ ಪವರ್ ಗೇಮ್ ಕುರಿತು ಸಂವಾದ ನಡೆಸಲಿದ್ದಾರೆ. ರುಚಿರಾ ಕಾಂಬೋಜ್, ಡಾ. ಸ್ವಸ್ತಿ ರಾವ್, ಪತ್ರಕರ್ತ ಆದಿತ್ಯರಾಜ್ ಕೌಲ್ ಹಾಗೂ ಡಾ. ಬಿದಂದ ಬೆಂಗಪ್ಪ ಅವರು ಭಾರತದ ನೆರೆಹೊರೆಯ ಸಂಬಂಧಗಳ ಕುರಿತು ಚರ್ಚಿಸಲಿದ್ದಾರೆ. ಟಿ. ಎಸ್. ತಿರುಮೂರ್ತಿ, ಡಾ. ಶ್ರೀರಾಮ್ ಚೌಲಿಯಾ ಮತ್ತು ವಿಜಿತ್ ಕನಹಳ್ಳಿ ಅವರು ಜಾಗತೀಕರಣಗೊಂಡ ವಿಶ್ವದಲ್ಲಿ ಭಾರತೀಯ ಚಿಂತನೆ ವಿಷಯದ ಮೇಲೆ ಮಾತನಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ದಿಗ್ಗಜರಾದ ಶತಾವಧಾನಿ ಡಾ. ಆರ್. ಗಣೇಶ್ ಹಾಗೂ ಡಾ. ಅಜಕ್ಕಳ ಗಿರೀಶ್ ಭಟ್ ಅವರು ಸಾಹಿತ್ಯದ ಮೂಲಕ ಮೌಲ್ಯಗಳ ಅನ್ವೇಷಣೆ ಕುರಿತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಎಎನ್‌ಐ ಸಂಪಾದಕೀಯ ನಿರ್ದೇಶಕಿ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ ಹಾಗೂ ಸುರಭಿ ಹೊದಿಗೆರೆ ಅವರು ಡಿಜಿಟಲ್ ಸುದ್ದಿಗಳು ಸಾರ್ವಜನಿಕ ಕ್ಷೇತ್ರವನ್ನು ಹೇಗೆ ರೂಪಿಸುತ್ತಿವೆ ಎಂಬುದರ ಬಗ್ಗೆ ಚರ್ಚಿಸಲಿದ್ದಾರೆ.
ಚಿತ್ರ ಮತ್ತು ಚಿಂತನ ಗೋಷ್ಠಿಯಲ್ಲಿ ಪಿ. ಶೇಷಾದ್ರಿ, ಮಾಳವಿಕಾ ಅವಿನಾಶ್ ಹಾಗೂ ಪಲ್ಲವಿ ರಾವ್ ಕಾರಂತ್ ಭಾಗವಹಿಸಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ‘ಬದುಕುಳಿದವರು ಕಂಡಂತೆ’ ಪುಸ್ತಕ ಸಂವಾದವನ್ನು ಶ್ರೀಕಾಂತ್ ಶೆಟ್ಟಿ ಕಾರ್ಕಳ ನಡೆಸಿಕೊಡಲಿದ್ದಾರೆ. ಕಲ್ಪನೆ, ಕಥನ ಮತ್ತು ಕ್ಯಾಮರಾ ಗೋಷ್ಠಿಯಲ್ಲಿ ನಟಿ ರಂಜನಿ ರಾಘವನ್, ಸು ಫ್ರಂ ಸೋ. ಖ್ಯಾತಿಯ ಪೂರ್ಣಿಮಾ ಸುರೇಶ್ ಹಾಗೂ ಲೇಖಕಿ ಸೀಮಾ ಬುರುಡೆ ಭಾಗವಹಿಸಲಿದ್ದಾರೆ. ಉಜ್ವಲಾ ಕೃಷ್ಣರಾಜ್ ಅವರಿಂದ ಬೊಂಬೆಯಾಟ ಪ್ರದರ್ಶನವೂ ನಡೆಯಲಿದೆ.
ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಎರಡು ದಿನಗಳ ಮೇಳದಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳವೂ ಆಯೋಜಿಸಲಾಗಿದೆ.
ಇದಲ್ಲದೆ ಹಲವು ಆಕರ್ಷಕ ವಿಭಾಗಗಳನ್ನು ರೂಪಿಸಲಾಗಿದೆ ಎಂದು ಸುನಿಲ್ ಕುಲಕರ್ಣಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತ್ ಫೌಂಡೇಷನ್ ಸದಸ್ಯರಾದ ರಾಮದಾಸ್ ಕಟೀಲ್ ಹಾಗೂ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು.
Post a Comment