Top News

ಮೈಸೂರು ವಿಭಾಗದ ಅತ್ಯುತ್ತಮ ಕೃಷಿ ಸಾಧಕ’ ಪುರಸ್ಕಾರಕ್ಕೆ ಮೂಡುಬಿದಿರೆಯ ದರೆಗುಡ್ಡೆ ಕೊಟ್ರೊಟ್ಟುವಿನ ಹಿರಿಯ ಕೃಷಿಕ ನಾಗಪ್ಪ ಪೂಜಾರಿ ಆಯ್ಕೆ

ಮೂಡುಬಿದಿರೆ: ತಾಲೂಕಿನ ದರೆಗುಡ್ಡೆ ಗ್ರಾಮದ ಕೊಟ್ರೊಟ್ಟು ನಿವಾಸಿಯಾದ ಹಿರಿಯ ಕೃಷಿಕ ನಾಗಪ್ಪ ಪೂಜಾರಿ ಅವರು ಮೈಸೂರು ವಿಭಾಗ ಮಟ್ಟದಲ್ಲಿ ಆಯೋಜಿಸಲಾದ ಕೃಷಿ ಮೇಳದಲ್ಲಿ ನೀಡಲಾಗುವ ‘ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ’ಕ್ಕೆ ಭಾಜನರಾಗಿದ್ದಾರೆ. ಈ ವಿಷಯವನ್ನು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಅವರು ತಿಳಿಸಿದ್ದಾರೆ.

ದರೆಗುಡ್ಡೆಯ ತುಂಗಪ್ಪ ಪೂಜಾರಿ ಹಾಗೂ ನೀಲಮ್ಮ ಪೂಜಾರ್ತಿ ದಂಪತಿಯ ಪುತ್ರರಾದ ನಾಗಪ್ಪ ಪೂಜಾರಿ ಅವರು 1940ರಲ್ಲಿ ಜನಿಸಿದ್ದು, ಐದನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ ಕಳೆದ ಐದು ದಶಕಗಳಿಂದ ಕೃಷಿ ಕ್ಷೇತ್ರದಲ್ಲಿ ನವ ಪ್ರಯೋಗಗಳನ್ನು ನಡೆಸುತ್ತಾ ಗಮನಾರ್ಹ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಸುಮಾರು 45ರಿಂದ 50 ವರ್ಷಗಳ ಕಾಲ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ ಮೂರು ಎಕರೆ ಭೂಮಿಯಲ್ಲಿ ಭತ್ತ, ಅಡಿಕೆ, ತೆಂಗು, ವಿವಿಧ ಐದು ತಳಿಯ ಬಾಳೆ ಬೆಳೆಗಳೊಂದಿಗೆ ನಾಟಿ ಕೋಳಿ ಸಾಕಾಣಿಕೆ, ಜೋಳ, ಹೆಸರು ಕಾಳು ಸೇರಿದಂತೆ ವಿವಿಧ ಹಣ್ಣು–ಹಂಪಲುಗಳು ಮತ್ತು ಅರಣ್ಯ ಸಸ್ಯಗಳನ್ನು ಯಶಸ್ವಿಯಾಗಿ ಬೆಳೆಸುತ್ತಿದ್ದಾರೆ.
ಕೃಷಿಯಲ್ಲದೆ ಸಮಾಜ ಸೇವೆಯಲ್ಲಿಯೂ ಸಕ್ರಿಯರಾಗಿರುವ ನಾಗಪ್ಪ ಪೂಜಾರಿ ಅವರು, ವಿವಿಧ ಸಭೆ–ಸಮಾರಂಭಗಳಲ್ಲಿ ಅಡುಗೆ ಮಾಡುವ ಹವ್ಯಾಸ ಹೊಂದಿದ್ದಾರೆ. ಅಲ್ಲದೆ, ಕೆಲಸದ ಸಂದರ್ಭಗಳಲ್ಲಿ ಸಣ್ಣಪುಟ್ಟ ಗಾಯಗಳಿಗೆ ನಾಟಿ ಔಷಧಿ ನೀಡುವ ಮೂಲಕ ಜನಸೇವಕನಾಗಿಯೂ ಹೆಸರು ಮಾಡಿದ್ದಾರೆ.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಮತ್ತು ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಜನವರಿ 10, 11 ಹಾಗೂ 12ರಂದು ನಡೆಯಲಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಮತ್ತು ಸಸ್ಯ ಜಾತ್ರೆಯಲ್ಲಿ ಈ ಪುರಸ್ಕಾರವನ್ನು ಅವರಿಗೆ ಪ್ರದಾನ ಮಾಡಲಾಗುವುದು.

Post a Comment

Previous Post Next Post