ಮಂಗಳೂರು | ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯನ್ನು ಸೆರೆ ಹಿಡಿದ ಪೊಲೀಸರು

ಮಂಗಳೂರು:ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಆರೋಪಿ ಕಿರಣ್ ಎಂಬಾತನನ್ನು ಪೊಲೀಸರು ಸ್ಥಳೀಯರ ಸಹಕಾರದಿಂದ ಬಂಧಿಸಿದ್ದಾರೆ. 

ಮಾಲಾಡಿ ನಿವಾಸಿ ಪ್ರೇಮಾ ಶೆಟ್ಟಿ ಎಂಬವರು ವಿದೇಶದಲ್ಲಿದ್ದು ಅವರ ಮಾಲಾಡಿಯಲ್ಲಿರುವ ಮನೆಯಲ್ಲಿ ಯಾರೂ ವಾಸವಿಲ್ಲ. ಸುರಕ್ಷತೆಗಾಗಿ ಮನೆಗೆ ಸಿಸಿಟಿವಿ ಅಳವಡಿಸಲಾಗಿತ್ತು. ನವೆಂಬರ್ 9 ರಂದು ಬೆಳಿಗ್ಗೆ, ಸಿಸಿಟಿವಿ ವೀಕ್ಷಿಸಿದ್ದ ಪ್ರೇಮಾ ಅವರ ಮಗಳು, ಯಾರೋ ವ್ಯಕ್ತಿ ಮನೆಗೆ ಕಳ್ಳತನಕ್ಕೆ ನುಗ್ಗಿರುವುದು ಪತ್ತೆಯಾಗಿದ್ದು, ತಕ್ಷಣವೇ ಸನಿಹದ  ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಪ್ರಕಾಶ್ ಶೆಟ್ಟಿ  ಅವರಿಗೆ ಮಾಹಿತಿಯನ್ನು ನೀಡಿದ್ದು, ಅವರು ಸ್ಥಳಕ್ಕೆ ಧಾವಿಸಿದಾಗ, ಮನೆಯ ಮೇಲ್ಚಾವಣಿಯಲ್ಲಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದ ಅಪರಿಚಿತ ವ್ಯಕ್ತಿ ಕಂಡುಬಂದಿದ್ದಾನೆ. ಪ್ರಕಾಶ್ ಅವರನ್ನು ಗಮನಿಸಿದ ಆರೋಪಿತ ಕೆಳಗೆ ಹಾರಿ ಪರಾರಿಯಾಗಲು ಪ್ರಯತ್ನಿಸಿದಾಗ, ಅವರನ್ನು ಹಿಡಿಯಲು ಯತ್ನಿಸಿದ ಪ್ರಕಾಶ್ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ನಂತರ ಸ್ಥಳೀಯರು ಸೇರಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆತ ಕೇರಳ ಮೂಲದ ತಲಪಾಡಿ ನಿವಾಸಿ ಕಿರಣ್ ಎಂದು ತಿಳಿದುಬಂದಿದ್ದು, ನಂತರ ಅವರನ್ನು ಪುಂಜಾಲಕಟ್ಟೆ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025, ಕಲಂ 331(1), 62, 118(1), 307 BNS ACT ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಾಥಮಿಕ ವಿಚಾರಣೆಯಿಂದ ಆರೋಪಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿ, ಮಂಗಳೂರು ನಗರ ವ್ಯಾಪ್ತಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿ ಒಟ್ಟು 13 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

Post a Comment

Previous Post Next Post