ಪೆರಿಯಡ್ಕದಲ್ಲಿ ವಿದ್ಯಾರ್ಥಿಗಳ ಮೇಲೆ ಇಬ್ಬರಿಂದ ಹಲ್ಲೆ; ಕೋಮುದ್ವೇಷದ ಹಿನ್ನೆಲೆ ಪ್ರಕರಣ ದಾಖಲು

ಪೆರಿಯಡ್ಕ ಪ್ರದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯೊಬ್ಬನು ಅನಾರೋಗ್ಯದಿಂದ ಮನೆಯಲ್ಲಿದ್ದ ಕಾರಣ ಆತನ ಆರೋಗ್ಯ ವಿಚಾರಿಸಲು ಇನ್ನೂ ಒಂಬತ್ತು ಮಂದಿ ಸಹಪಾಠಿ ವಿದ್ಯಾರ್ಥಿ/ವಿದ್ಯಾರ್ಥಿನಿಯರೊಂದಿಗೆ ದಿನಾಂಕ 06-11-2025 ರಂದು ಬೆಳಗ್ಗೆ ಕಾಲೇಜಿನಿಂದ ಪೆರಿಯಡ್ಕ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.

ಅದೇ ವೇಳೆ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು — ಆರೋಪಿಗಳಾದ ಮುಸ್ತಾಫ ಮತ್ತು ಸಹಸವಾರ ಮುಸ್ತಾಫ ಪೆರಿಯಡ್ಕ — ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ, ಅವರ ಹೆಸರು, ಕಾಲೇಜು ಮತ್ತು ಊರಿನ ಕುರಿತು ವಿಚಾರಣೆ ನಡೆಸಿದರು. ನಂತರ ವಿಭಿನ್ನ ಕೋಮುಗಳ ವಿದ್ಯಾರ್ಥಿಗಳು ಒಟ್ಟಿಗೆ ತೆರಳುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕೋಮುದ್ವೇಷದಿಂದ ಅವಾಚ್ಯವಾಗಿ ಬೈದು, ಓರ್ವ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 107/2025 ಅಡಿಯಲ್ಲಿ ಕಲಂ 126(2), 352, 351(2), 115(2), 353(2) ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ.

Post a Comment

Previous Post Next Post