ಮಂಗಳೂರು: ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಪ್ರಥಮ ವರ್ಷದ ‘ಹಿಂದೂ ಮಹಾ ಶಕ್ತಿ ಗಣಪತಿ’ ಉತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿಯ ಛತ್ರಪತಿ ಶಿವಾಜಿ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಗಣಹೋಮ ನೆರವೇರಿತು. ಬಳಿಕ ಅತಿಥಿಗಳು ಹಾಗೂ ಸಮಿತಿ ಪದಾಧಿಕಾರಿಗಳು ಗಣೇಶೋತ್ಸವಕ್ಕೆ ಚಾಲನೆ ನೀಡಿದರು.
ಉತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ ಹಾಗೂ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ದಿಕ್ಸೂಚಿ ಭಾಷಣ ಮಾಡಿದರು.
ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಭವ್ಯ ಶೋಭಾಯಾತ್ರೆ :
ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಭವ್ಯ ಶೋಭಾಯಾತ್ರೆಯಲ್ಲಿ ಬಾಲ ಸಂಸ್ಕಾರ ಕೇಂದ್ರದ ಮಕ್ಕಳ ಕುಣಿತ ಭಜನೆ, ಚೆಂಡೆ–ಸಿಂಗಾರಿ ಮೇಳ ಹಾಗೂ ಗಣಪತಿ ಮೂರ್ತಿಯನ್ನು ಇರಿಸಲಾಗಿದ್ದ ಟ್ಯಾಬ್ಲೋ ಗಮನ ಸೆಳೆಯಿತು.
ಶಕ್ತಿನಗರದ ಛತ್ರಪತಿ ಶಿವಾಜಿ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯು ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ತೆರಳಿ, ಬಳಿಕ ಬಿಕರ್ನಕಟ್ಟೆ, ಕೈಕಂಬ, ಮರೋಳಿ ಮಾರ್ಗವಾಗಿ ಪಡೀಲ್ ಬೈರಾಡಿ ಕೆರೆಗೆ ತಲುಪಿತು. ಅಲ್ಲಿ ಶ್ರೀ ಮಹಾಗಣಪತಿ ದೇವರ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಿ ಜಲಸ್ತಂಭನಗೊಳಿಸುವ ಮೂಲಕ ಶಕ್ತಿನಗರ ಗಣೇಶೋತ್ಸವ–2026ಕ್ಕೆ ತೆರೆ ಎಳೆಯಲಾಯಿತು.
Post a Comment