ಕರಾವಳಿ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್, ಕಸ್ತೂರಿ ರಂಗನ್ ವರದಿ ಬಾಧಿತರ ಬಳಿಗೆ ತೆರಳಿ ಅಭಿಪ್ರಾಯ ಸಂಗ್ರಹ : ಡಿಕೆಶಿ

ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದ ಅಭಿವೃದ್ಧಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, “ಕರಾವಳಿ ಮತ್ತು ಮಲೆನಾಡು ವಿದ್ಯಾವಂತರು ಹಾಗೂ ಬುದ್ಧಿವಂತರು ಇರುವ ಜಿಲ್ಲೆಗಳು. ಈ ಭಾಗಕ್ಕೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಸಂಪುಟ ಸಭೆ ನಡೆಸುತ್ತಿದ್ದೇವೆ” ಎಂದರು.

ಕರಾವಳಿ ಭಾಗದ ಶಾಸಕರು ಹಾಗೂ ಸಂಸದರು ತಮ್ಮನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳು ಮತ್ತು ವಿವಿಧ ಬೇಡಿಕೆಗಳನ್ನು ತಿಳಿಸಿದ್ದಾರೆ. ಈ ಬೇಡಿಕೆಗಳನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಅವುಗಳು ತಮ್ಮ ಗಮನದಲ್ಲಿವೆ. ಸ್ಥಳೀಯ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸಲು ಸಂಪುಟ ಸಭೆಯಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ : ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

“ಕಸ್ತೂರಿ ರಂಗನ್ ವರದಿ ಬಗ್ಗೆ ಆಯಾ ಶಾಸಕರು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿದ್ದೇವೆ. ಎರಡು ದಿನಗಳ ಅಧಿವೇಶನದಲ್ಲಿ ಬರ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ನಡೆಯಲಿದೆ. ಅರಣ್ಯ ಸಚಿವರೂ ತಮ್ಮ ವರದಿಯನ್ನು ನೀಡಲಿದ್ದಾರೆ” ಎಂದರು.

ಬಾಧಿತ ಜನರೊಂದಿಗೆ ನೇರ ಮಾತುಕತೆ : ಕಸ್ತೂರಿ ರಂಗನ್ ವರದಿಯಿಂದ ಬಾಧಿತರಾಗಿರುವ ಜನರೊಂದಿಗೆ ನೇರವಾಗಿ ಮಾತನಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

“ಕಸ್ತೂರಿ ರಂಗನ್ ವರದಿಯಿಂದ ಬಾಧಿತ ಜನರ ಜೊತೆ ಮಾತನಾಡುತ್ತೇನೆ. ನೇರವಾಗಿ ಅವರ ಬಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Post a Comment

Previous Post Next Post