ಮಂಗಳೂರು, ಸೆ.9: ಶಿಕ್ಷಕರು ಪ್ರಾಮಾಣಿಕತೆ, ನಿಸ್ವಾರ್ಥ ಸೇವಾ ಮನೋಭಾವ ಹಾಗೂ ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರ ಜೊತೆಗೆ, ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ, ಅವರನ್ನು ಭವಿಷ್ಯದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಶ್ರೇಷ್ಠ ಜವಾಬ್ದಾರಿ ಹೊಂದಿದ್ದಾರೆ ಎಂದು ಕೆನರಾ ವರ್ಕ್‌ಶಾಪ್ ಕೈಗಾರಿಕಾ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರೇಮನಾಥ್ ಕುಡ್ವ ಹೇಳಿದರು.
ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ಸೆ.8ರಂದು ರೋಟರ್ಯಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಬದುಕು ಹಾಗೂ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕುವ ಶಿಲ್ಪಿಗಳಾಗಿದ್ದಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ರೋಟರಿ ಜಿಲ್ಲಾ 3181ರ ಮಾಜಿ ಗವರ್ನರ್ ಡಾ. ದೇವದಾಸ್ ರೈ ಗೌರವ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಿಕ್ಷಕರು ಪಠ್ಯಪುಸ್ತಕದ ಜ್ಞಾನವನ್ನು ನೀಡುವುದಕ್ಕೆ ಸೀಮಿತರಾಗದೆ, ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಫ್ಲೋರಿನ್ ರೀಟಾ ಡಿಸೋಜಾ ಅವರನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ‘ಆದರ್ಶ ಶಿಕ್ಷಕಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ಲೋರಿನ್ ರೀಟಾ ಡಿಸೋಜಾ ಅವರು, ರೋಟರ್ಯಾಕ್ಟ್ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಕೇಶವ್ ರಾಮಕುಂಜ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಹಾಗೂ ಸಾಧನೆಗಳ ವಿವರ ನೀಡಿದರು.
ಸಂಸ್ಥೆಯ ಅಧ್ಯಕ್ಷ ರಕ್ಷಣ್ ಅವರು ಸ್ವಾಗತಿಸಿ, ಶಿಕ್ಷಕರ ದಿನಾಚರಣೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಶಿಕ್ಷಕರ ದಿನಾಚರಣೆ ಎಂದು ಅವರು ಹೇಳಿದರು.
ಕಾರ್ಯದರ್ಶಿ ಮುಖೇಶ್ ವರದಿ ಮಂಡಿಸಿದರು. ಕೋಶಾಧಿಕಾರಿ ಪ್ರಾಥಿಕ್ ಶೆಟ್ಟಿ ವಂದಿಸಿದರು.
Post a Comment