ಮಂಗಳೂರು : ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಿರುವ ಕರಾರು ಒಪ್ಪಂದವನ್ನು ರದ್ದುಗೊಳಿಸುವುದು, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವುದು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಸಿಪಿಐಎಂ ಜಿಲ್ಲಾದ್ಯಂತ ನಡೆಸುತ್ತಿರುವ ಹೋರಾಟದ ಅಂಗವಾಗಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ನಿಯೋಗ ಸೋಮವಾರ ಎಕ್ಕೂರು ಹಾಗೂ ಪಡೀಲು ನಗರ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿತು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್, ಅಳಪೆ ದಕ್ಷಿಣ, ಅಳಪೆ ಉತ್ತರ, ಕಂಕನಾಡಿ ಬಿ, ಜಪ್ಪಿನಮೊಗರು, ಕಣ್ಣೂರು ಸೇರಿದಂತೆ ಸುತ್ತಮುತ್ತಲಿನ ಹಲವು ವಾರ್ಡ್‌ಗಳ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಈ ಎರಡು ಆರೋಗ್ಯ ಕೇಂದ್ರಗಳಿಗೆ ಪ್ರತಿದಿನ ನೂರಕ್ಕೂ ಅಧಿಕ ಮಂದಿ ಚಿಕಿತ್ಸೆಗಾಗಿ ಆಗಮಿಸುತ್ತಾರೆ.
ಪಡೀಲು ನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾಗಿರುವ ಎರಡು ಸ್ಟಾಫ್ ನರ್ಸ್ ಹುದ್ದೆಗಳು ಕಳೆದ ಆರು ತಿಂಗಳಿಂದ ಖಾಲಿ ಇದ್ದು, ಐದು ಎಎನ್‌ಎಂ ಹುದ್ದೆಗಳ ಪೈಕಿ ಎರಡು ಹುದ್ದೆಗಳು ಭರ್ತಿಯಾಗಿಲ್ಲ ಎಂದು ನಿಯೋಗ ತಿಳಿಸಿದೆ.
ಎಕ್ಕೂರು ನಗರ ಆರೋಗ್ಯ ಕೇಂದ್ರದಲ್ಲಿಯೂ ವೈದ್ಯರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಎರಡು ಎಎನ್‌ಎಂ ಹುದ್ದೆಗಳು ಖಾಲಿ ಇವೆ. ಎರಡೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿದ್ದರೂ, ಗರ್ಭಿಣಿಯರಿಗೆ ನಡೆಸಲಾಗುತ್ತಿದ್ದ ಥೈರಾಯ್ಡ್ ಸೇರಿದಂತೆ ಕೆಲವು ಪ್ರಮುಖ ಪರೀಕ್ಷೆಗಳ ಸೇವೆಯನ್ನು ಆರೋಗ್ಯ ಇಲಾಖೆ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ನಿಯೋಗ ಆರೋಪಿಸಿದೆ.
ನಗರ ಆರೋಗ್ಯ ಕೇಂದ್ರಗಳು ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಹಾಗೂ ರಜಾದಿನಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಉಳಿದ ಸಮಯದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂದು ಸಿಪಿಐಎಂ ಮುಖಂಡರು ಗಮನ ಸೆಳೆದರು.
ಸಿಪಿಐಎಂ ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಮಾತನಾಡಿ, ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಸ್ಟಾಫ್ ನರ್ಸ್ ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಖಾಯಂಗೊಳಿಸಬೇಕು. ಗರ್ಭಿಣಿಯರಿಗೆ ಹಿಂದಿನಂತೆ ಉಚಿತ ಥೈರಾಯ್ಡ್ ಪರೀಕ್ಷೆಗಳನ್ನು ಪುನರಾರಂಭಿಸಬೇಕು ಹಾಗೂ ಆರೋಗ್ಯ ಕೇಂದ್ರಗಳ ಸೇವಾ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿಯ ಕಾರ್ಯದರ್ಶಿ ದೀಪಕ್ ಬಜಾಲ್, ಕಂಕನಾಡಿ ಬಿ ಕಾರ್ಯದರ್ಶಿ ಜಗದೀಶ್ ಬಜಾಲ್, ಅಶೋಕ್ ಎನೆಲ್ಮಾರ್, ಯಶ್ ರಾಜ್ ಬಜಾಲ್, ಧೀರಾಜ್ ಬಜಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Post a Comment