Bajpe | ಹಣ ಕಳವು ಅನುಮಾನ ; ಯುವತಿಯ ಮೇಲೆ ಚಿಕ್ಕಪ್ಪನಿಂದಲೇ ಅಮಾನುಷ ರೀತಿಯಲ್ಲಿ ಹಲ್ಲೆ

ಬಜ್ಪೆ, ಜೂನ್ 18: ಹಣ ಕಳವಾಗಿರುವ ಅನುಮಾನದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮಗಳ ಮೇಲೆಯೇ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು–ಕಿಲೆಂಜಾರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆಗೊಳಗಾದವರನ್ನು ಕುಪ್ಪೆಪದವು ಕಿಲೆಂಜಾರು ಹೊಸಮನೆ ನಿವಾಸಿ ಮೈಸೀನ್ (29) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಚಿಕ್ಕಪ್ಪ ಬಶೀರ್ ವಿರುದ್ಧ ಆರೋಪ ಕೇಳಿಬಂದಿದೆ.

ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಬಶೀರ್ ಅವರ ಮನೆಯಿಂದ ಹಣ ಕಳೆದುಹೋಗಿರುವ ವಿಚಾರವಾಗಿ ಮೈಸೀನ್ ಅವರ ಮನೆಗೆ ಬಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಮೈಸೀನ್ ತಿಳಿಸಿದಾಗ, ಕೋಪಗೊಂಡ ಬಶೀರ್ ಮರದ ಒಣಕೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಿಂದ ಮೈಸೀನ್ ಅವರ ಎಡ ಕಾಲಿನ ಹಿಂಭಾಗ ಹಾಗೂ ಬೆನ್ನಿನ ಮಧ್ಯಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಮೈಸೀನ್ ನೀಡಿದ ದೂರಿನ ಆಧಾರದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post