ಯಕ್ಷಗಾನ ಕಲಾವಿದರು ಹಿಂದಿನ ಕಾಲಘಟ್ಟದಲ್ಲಿ ಹೆಚ್ಚಿನವರು ಸಲಿಂಗಿಗಳಾಗಿದ್ದರು, ಅಂತಹ ಅನಿವಾರ್ಯತೆ ಆ ಕಾಲದಲ್ಲಿ ಇದ್ದಿತ್ತು. ಯಕ್ಷಗಾನದೊಳಗೆ ಹೋಮೋಸೆಕ್ಸ್ ಬೆಳೀತಿದ್ದವು ಎನ್ನುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಕ್ಕೆ ಈಡಾಗಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ 'ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು' ಹಾಗೂ 'ನಾವು ಕೂಗುವ ಕೂಗು' ಕೃತಿಗಳನ್ನು ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
ಭಾಷಣದಲ್ಲಿ ನೀಡಿದ ಹೇಳಿಕೆ ವಿವಾದ ಹುಟ್ಟಿಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸ್ತ್ರೀವೇಷದ ಕಲಾವಿದ ಸಲಿಂಗಕಾಮಕ್ಕೆ ಒಪ್ಪದಿದ್ದರೆ ಮರು ದಿವಸ ಪದ್ಯವನ್ನೇ ಕೊಡುತ್ತಿರಲಿಲ್ಲ. ಮೇಳವೇ ಕಲಾವಿದರಿಗೆ ದೊರಕುತ್ತಿರಲಿಲ್ಲ. ವೇದಿಕೆಯಲ್ಲಿ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದರು.
ಸತ್ಯವನ್ನು ಹೇಳಲು ನಾವು ಹಿಂಜರಿಯಬಾರದು. ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದುದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದು ಹೇಳಿದರು. ಈಗ ನಾವು ಹೋಮೋ ಸೆಕ್ಸುವಲ್ ಬಗ್ಗೆ ಮಾತನಾಡುತ್ತೇವೆ, ಬಹಳ ಕೇಳುತ್ತೇವೆ, ಹಿಂದೆ ಅಂತಹ ಮುಕ್ತ ವಾತಾವರಣವಿರಲಿಲ್ಲ. ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ, ನಾವು ಚಿಕ್ಕವರಿದ್ದಾಗ ನಮ್ಮ ಫಸ್ಟ್ ಕ್ರಶ್ ಗಳು ಸ್ತ್ರೀ ವೇಷಧಾರಿಗಳು, ಈಗ ಸಿನಿಮಾ ನಟ, ನಟಿಯರ ಹೆಸರನ್ನು ಶಾಲೆ-ಕಾಲೇಜಿಗೆ ಹೋಗುವ ಹುಡುಗರು, ಹುಡುಗಿಯರು ಹೇಳುತ್ತಾರೆ, ನಮಗೆ ಆಗ ಇದ್ದದ್ದು ಕ್ರಶ್ ಸ್ತ್ರೀ ವೇಷಧಾರಿಗಳ ಮೇಲೆ. ಅವರು ರಂಗದ ಮೇಲೆ ಬಂದು ಕುಣಿದರೆ ನೋಡಲು ಚೆಂದವಿತ್ತು.
ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಆಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಅಂತಹ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲವಾಗಿದೆ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಬಾರದು. ಅವರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು ಎಂದಿದ್ದರು.
Post a Comment