ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ರೂಪಿಸಿರುವ ಸಮಗ್ರ ಅಭಿವೃದ್ಧಿ ಯೋಜನೆ (CDP) ಹಾಗೂ ಹೊಸವಲಯ ಕಟ್ಟಡ ನಿಯಮಾವಳಿಗಳು ಅವೈಜ್ಞಾನಿಕವಾಗಿದ್ದು, ಇದರಿಂದ ಸಾಮಾನ್ಯ ಜನರು ಮನೆ ನಿರ್ಮಾಣ ಮಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳನ್ನು ತಕ್ಷಣ ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ULMS ಆನ್ಲೈನ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳಿಂದ ಕಟ್ಟಡ ಪರವಾನಗಿ ಪಡೆಯುವುದು ವಿಳಂಬವಾಗುತ್ತಿದೆ. ಸಣ್ಣ ಮನೆ ನಿರ್ಮಾಣಕ್ಕೂ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ದೊಡ್ಡ ಕಟ್ಟಡಗಳಿಗೆ ಆಫ್ಲೈನ್ ಮೂಲಕ ತ್ವರಿತ ಅನುಮತಿ ನೀಡುತ್ತಿರುವುದು ತಾರತಮ್ಯದ ಕ್ರಮವಾಗಿದೆ ಎಂದು ಆರೋಪಿಸಿದರು.
ಹೊಸವಲಯ ನಿಯಮದ ಟೆಲಿಸ್ಕೋಪಿಕ್ ಸೆಟ್ಬ್ಯಾಕ್ ವ್ಯವಸ್ಥೆಯಲ್ಲಿ ಏಳು ಅಂತಸ್ತಿನ ಕಟ್ಟಡಕ್ಕೆ ಒಂದು ಮೀಟರ್ ಹಾಗೂ ಎರಡು ಅಂತಸ್ತಿನ ಮನೆಗೆ 1.5 ಮೀಟರ್ ಸೆಟ್ಬ್ಯಾಕ್ ನಿಗದಿಪಡಿಸಿರುವುದು ಅವೈಜ್ಞಾನಿಕ. ಇದು ಸಾರ್ವಜನಿಕ ಸುರಕ್ಷತೆ ಹಾಗೂ ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿರುವುದರಿಂದ ಈ ನಿಯಮವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದೆ 6 ಮತ್ತು 7.5 ಮೀಟರ್ ರಸ್ತೆಗಳಿಗಾಗಿ ಜಾಗ ಬಿಟ್ಟುಕೊಟ್ಟವರಿಗೆ ನೀಡಲಾಗುತ್ತಿದ್ದ TDR ಹಾಗೂ ಪ್ರೀಮಿಯಂ FAR ಸೌಲಭ್ಯಗಳನ್ನು ಮರುಸ್ಥಾಪಿಸಬೇಕು. ಹೋಟೆಲ್, ವಸತಿಗೃಹ, ಶಾಲೆ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ 12 ಮೀಟರ್ ರಸ್ತೆ ಕಡ್ಡಾಯಗೊಳಿಸಿರುವ ನಿಯಮ ಮಂಗಳೂರಿನ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಧಾರ್ಮಿಕ ಕೇಂದ್ರಗಳು ಹಾಗೂ ಶಾಲೆಗಳ ಅಭಿವೃದ್ಧಿಗೂ ಅಡ್ಡಿಯಾಗಲಿದೆ ಎಂದು ಹೇಳಿದರು.
ಲೇಔಟ್ ಅನುಮೋದನೆಗೆ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರ (NOC) ಪಡೆಯಲು ಎರಡು-ಮೂರು ವರ್ಷಗಳವರೆಗೆ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಯನ್ನು MUDA ಮೂಲಕವೇ ಸರಳೀಕರಿಸಬೇಕು. ಮಂಗಳಾ ಕಾರ್ನಿಷ್ ರಸ್ತೆ ಸೇರಿದಂತೆ CDPಯಲ್ಲಿನ ಅವೈಜ್ಞಾನಿಕ ರಸ್ತೆ ಜೋಡಣೆ ಮತ್ತು ಅಗಲೀಕರಣ ಯೋಜನೆಗಳಿಂದ ಜನವಸತಿ ಪ್ರದೇಶಗಳ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆ ಯೋಜನೆಗಳಲ್ಲಿನ ಬದಲಾವಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಳೆದ ಸುಮಾರು 20 ವರ್ಷಗಳಿಂದ ಸಮಗ್ರ CDP ಪರಿಷ್ಕರಣೆ ನಡೆದಿಲ್ಲ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮನೆ ನಿರ್ಮಾಣದ ಹಕ್ಕು, ಸಾರ್ವಜನಿಕ ಸುರಕ್ಷತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗಬಾರದು. ಹೊಸವಲಯ ಕಟ್ಟಡ ನಿಯಮಾವಳಿಗಳನ್ನು ಸಮಗ್ರವಾಗಿ ಮರುಪರಿಶೀಲಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನ್ಯಾಯಯುತ ತಿದ್ದುಪಡಿ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಜೆ. ಪಾಲೆಮಾರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರ್ ಸಂಘದ ಅಧ್ಯಕ್ಷ ಇಂಜಿನಿಯರ್ ಐ. ಯೋಗೀಶ್ ಪೈ ಉಪಸ್ಥಿತರಿದ್ದರು.
Post a Comment