ಮಂಗಳೂರು: ನೆಲಮಟ್ಟದಿಂದ ಬೆಳೆದು ಬಂದ ರಾಜಕಾರಣಿಗೆ ಮಾತ್ರ ಸಾಮಾಜಿಕ ನ್ಯಾಯದ ಕಾಳಜಿ ಮತ್ತು ಜನರ ಸಂಕಷ್ಟಗಳ ಅರಿವು ಇರಲು ಸಾಧ್ಯ. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಅಂತಹ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮ ಆತ್ಮಕಥನದಲ್ಲಿ ನೈತಿಕತೆಗೆ ಆದ್ಯತೆ ನೀಡಿರುವ ಅವರು, ಸಮಾಜಕ್ಕೆ ವಿವೇಕದ ಸಂದೇಶ ನೀಡಿದ್ದಾರೆ ಎಂದು ಲೇಖಕ ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು.
ಮಂಗಳೂರು ತುಳು ಭವನದಲ್ಲಿ ಗುರುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರಾವಳಿ ಲೇಖಕಿಯರ ಸಂಘ ಹಾಗೂ ಆಕೃತಿ ಆಶಯ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ‘ತುಳುವೆರೆ ತಿಂಗೊಲ್ದ ಪೊಲಬು’ ಮತ್ತು ‘ಚಿತ್ತ ಭಿತ್ತಿಯ ಪತ್ತಾಯ’ ಆತ್ಮಕಥನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಗಳನ್ನು ಪರಿಚಯಿಸಿ ಅವರು ಮಾತನಾಡಿದರು.
ಶಕುಂತಳಾ ಶೆಟ್ಟಿ ಅವರ ಕೃತಿಗಳಲ್ಲಿ ಮಹಿಳೆಯರ ನೋವು, ಸಂಕಟ ಹಾಗೂ ನೈತಿಕ ಮೌಲ್ಯಗಳ ಕುರಿತಾದ ವಿಚಾರಗಳು ಮನಮುಟ್ಟುವಂತೆ ವ್ಯಕ್ತವಾಗಿವೆ. ಕಾಲ್ನಡಿಗೆಯ ಮೂಲಕ ರಾಜಕೀಯ ಬದುಕು ಕಟ್ಟಿಕೊಂಡ ಅವರು, ಸಾಮಾಜಿಕ ನ್ಯಾಯದ ಪರವಾಗಿ ಕಾಳಜಿ ವಹಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ರಾಜಕೀಯ ತ್ಯಾಗದ ಉಲ್ಲೇಖವಿಲ್ಲ :
ರಾಜಕೀಯ ಬದುಕಿನ ಕುತೂಹಲಕಾರಿ ಸಂಗತಿಗಳನ್ನು ನಿರೀಕ್ಷಿಸಿ ಕೃತಿಗಳನ್ನು ಓದುವವರಿಗೆ, ರಾಜಕೀಯಕ್ಕಾಗಿ ಅವರು ಮಾಡಿದ ತ್ಯಾಗಗಳ ಬಗ್ಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ. ಆದರೆ, ಈ ಕೃತಿಗಳು ಮತ್ತೊಂದು ಆತ್ಮಚರಿತ್ರೆಯಾಗಿ ಉಳಿಯದೆ ಕನ್ನಡ ಸಾಹಿತ್ಯಕ್ಕೆ ಹಾಗೂ ಸಮಾಜಕ್ಕೆ ವಿವೇಕದ ಸಂದೇಶ ನೀಡುವ ಮಹತ್ವದ ಪ್ರಯತ್ನವಾಗಿವೆ ಎಂದು ದೇರ್ಲ ಹೇಳಿದರು.
‘ತುಳುವೆರೆ ತಿಂಗೊಲ್ದ ಪೊಲಬು’ ಕೃತಿಯನ್ನು ಪರಿಚಯಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ಕೃತಿಯಲ್ಲಿ ತುಳುವಿನ ಅಪರೂಪದ ಪದಗಳನ್ನು ಬಳಸಲಾಗಿದೆ. ತುಳುನಾಡಿನಲ್ಲಿ ಪ್ರತಿ ತಿಂಗಳು ಆಚರಣೆಯಲ್ಲಿರುವ ಸಂಪ್ರದಾಯ, ಸಂಸ್ಕೃತಿ ಹಾಗೂ ವಿಶೇಷತೆಗಳನ್ನು ಸರಳವಾಗಿ ನಿರೂಪಿಸಿರುವುದು ಕೃತಿಯ ವಿಶೇಷತೆ ಎಂದರು.
ಕೃತಿಕಾರ್ತಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಶಾಲಾ ದಿನಗಳಲ್ಲಿಯೇ ಕವನಗಳನ್ನು ಬರೆಯುತ್ತಿದ್ದೆ. ಮದುವೆಯ ನಂತರ ಬರವಣಿಗೆ ಸ್ಥಗಿತಗೊಂಡಿತ್ತು. ಬಳಿಕ ಯುವಜನ ಮೇಳ ಹಾಗೂ ಆಕಾಶವಾಣಿಯ ಮೂಲಕ ಮತ್ತೆ ಬರವಣಿಗೆಯನ್ನು ಮುಂದುವರಿಸಿದೆ. ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ಬರವಣಿಗೆಗೆ ವಿರಾಮ ನೀಡಬೇಕಾಯಿತು. ಇದೀಗ ಮತ್ತೆ ಬರವಣಿಗೆಯನ್ನು ಆರಂಭಿಸಿದ್ದೇನೆ ಎಂದು ತಮ್ಮ ಸಾಹಿತ್ಯ ಪಯಣವನ್ನು ಹಂಚಿಕೊಂಡರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ರಾಜಕೀಯ ಧುರೀಣ ಪುತ್ತೂರು ರಾಮ್ ಭಟ್ ಅವರ ಮಾರ್ಗದರ್ಶನದಲ್ಲಿ ಬೆಳೆದ ಶಕುಂತಳಾ ಶೆಟ್ಟಿ ಅವರು ಪ್ರಾಮಾಣಿಕ ರಾಜಕಾರಣಿಯಾಗಿ, ತಮ್ಮ ನೈತಿಕ ನಿಲುವುಗಳ ಮೂಲಕ ವಿಶಿಷ್ಟ ಮನ್ನಣೆ ಗಳಿಸಿದ್ದಾರೆ ಎಂದರು.
ಹಿರಿಯ ಲೇಖಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಕಾರ್ಯದರ್ಶಿ ಕೃಷ್ಣವೇಣಿ ಉಪಸ್ಥಿತರಿದ್ದರು. ಆಕೃತಿ ಆಶಯ ಪಬ್ಲಿಕೇಶನ್ನ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಸ್ವಾಗತಿಸಿ, ವಂದಿಸಿದರು.
Post a Comment