ಬೆಂಗಳೂರು : ಏಳು ಮಂದಿಯ ಹತ್ಯೆ ಬಳಿಕ ಮತ್ತಿಬ್ಬರ ಕೊಲೆಗೆ ಸಂಚು ? ಕನ್ನಡ ಮೆಸೇಜ್‌ನಿಂದ ಸಿಕ್ಕಿಬಿದ್ದ ಸೈಕೋ ಕಿಲ್ಲರ್ !

ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಇಂದುಶೇಖರ್‌ನ ಕರಾಳ ಕೃತ್ಯಗಳು ತನಿಖೆಯಲ್ಲಿ ಒಂದೊಂದಾಗಿ ಬಯಲಾಗುತ್ತಿವೆ. ಒಟ್ಟು ಒಂಬತ್ತು ಮಂದಿಯನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಪೊಲೀಸರ ವಿಚಾರಣೆಯಲ್ಲಿ ಹೊರಬಂದಿದೆ.

15 ದಿನಗಳಲ್ಲಿ ಏಳು ಕೊಲೆ :
ಅಕ್ಟೋಬರ್ 16ರಿಂದಲೇ ಹತ್ಯಾಕಾಂಡ ಆರಂಭಿಸಿದ್ದ ಆರೋಪಿ, ಅಕ್ಟೋಬರ್ 31ರ ವೇಳೆಗೆ ಏಳು ಮಂದಿಯನ್ನು ಕೊಂದಿದ್ದಾನೆ ಎನ್ನಲಾಗಿದೆ. ಹತ್ಯೆಯ ಬಳಿಕ ಮೃತರ ಚಿನ್ನಾಭರಣಗಳನ್ನು ದೋಚಿ, ಸ್ವಚ್ಛಗೊಳಿಸಿ ಕೆಲವು ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಉಳಿದ ಒಡವೆಗಳನ್ನು ಗಿರವಿ ಇಟ್ಟು ಪಡೆದ ಹಣದಿಂದ ವಾಹನಗಳಿಗೆ ಡೀಸೆಲ್ ಹಾಕಿಸಿಕೊಂಡು ಪ್ರಯಾಣಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕನ್ನಡ ಮೆಸೇಜ್‌ಗಳೇ ಆರೋಪಿಗೆ ಮುಳುವು! :
ಹತ್ಯೆಯ ಬಳಿಕ ಶಂಕರ್ ಮತ್ತು ನಳಿನಿಯ ಮೊಬೈಲ್‌ಗಳಿಂದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಉತ್ತರ ಭಾರತ ಪ್ರವಾಸದಲ್ಲಿರುವುದಾಗಿ ಸುಳ್ಳು ಸಂದೇಶಗಳನ್ನು ಕಳುಹಿಸಿದ್ದ. ಕರೆ ಮಾಡಬೇಡಿ, ನೆಟ್‌ವರ್ಕ್ ಸಮಸ್ಯೆಯಿದೆ ಎಂಬ ಸಂದೇಶಗಳ ಜೊತೆಗೆ ಮಗನ ಧ್ವನಿಯಲ್ಲಿರುವ ವಾಯ್ಸ್ ನೋಟ್ ಕೂಡ ಕಳುಹಿಸಿದ್ದ ಎನ್ನಲಾಗಿದೆ. ಆದರೆ ಶಂಕರ್‌ಗೆ ಕನ್ನಡದಲ್ಲಿ ಸರಾಗವಾಗಿ ಟೈಪ್ ಮಾಡಲು ಬರುವುದಿಲ್ಲ ಎಂಬುದನ್ನು ತಿಳಿದಿದ್ದ ಸ್ನೇಹಿತರಿಗೆ ಕನ್ನಡದಲ್ಲಿ ಬಂದ ಸಂದೇಶಗಳು ಅನುಮಾನ ಮೂಡಿಸಿದವು. ನವೆಂಬರ್ 2ರಂದು ನಳಿನಿಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ಒಂಬತ್ತು ಮಂದಿ ಟಾರ್ಗೆಟ್ ? :
11 ವರ್ಷದ ಬಾಲಕನನ್ನು ತನ್ನ ವಶದಲ್ಲಿಟ್ಟುಕೊಂಡಿದ್ದರೂ ಹತ್ಯೆ ಮಾಡಿರಲಿಲ್ಲ ಎನ್ನಲಾಗಿದೆ. ಒಟ್ಟು ಒಂಬತ್ತು ಮಂದಿಯ ಹತ್ಯೆಗೆ ಯೋಜನೆ ರೂಪಿಸಿದ್ದನೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾಡಿನಲ್ಲಿ ಪತ್ತೆಯಾದ ಮೃತದೇಹಗಳು :
ತಮಿಳುನಾಡಿನ ಸೇಲಂ ಜಿಲ್ಲೆಯ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಎರಡು ಮೃತದೇಹಗಳು ತನ್ನ ಪತ್ನಿ ಸುನೀತಾ ಮತ್ತು ಅತ್ತೆ ರೂಪವತಿಯದ್ದೆಂದು ಆರೋಪಿ ಗುರುತಿಸಿದ್ದಾನೆ ಎನ್ನಲಾಗಿದೆ. ನಂದಿಬೆಟ್ಟದ ಬಳಿ ಏಳು ವರ್ಷದ ಬಾಲಕ ಪುನೀತ್‌ನ ಮೃತದೇಹವೂ ಪತ್ತೆಯಾಗಿದೆ. ಎರ್ಕಾಡ್ ಅರಣ್ಯ ಪ್ರದೇಶದಲ್ಲಿಯೂ ಮತ್ತೆರಡು ಮೃತದೇಹಗಳು ಪತ್ತೆಯಾಗಿರುವ ಮಾಹಿತಿ ಇದೆ. ಉಳಿದ ಮೃತದೇಹಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಬೆಂಗಳೂರು, ಮಂಗಳೂರು, ಚೆನ್ನೈ ಸುತ್ತಾಟ! :
ಹತ್ಯೆಯ ಬಳಿಕ ಆರೋಪಿ ಬೆಂಗಳೂರು, ಮಂಗಳೂರು, ಚೆನ್ನೈ ಹಾಗೂ ನಂದಿಬೆಟ್ಟ ಸೇರಿದಂತೆ ಹಲವು ಕಡೆ ಸಂಚರಿಸಿದ್ದಾನೆ. ಮಗಳಿಗೆ ಕೆಲವು ಒಡವೆಗಳನ್ನು ನೀಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಬೇರೆಯವರ ಪಾತ್ರವಿದೆಯೇ, ಹತ್ಯೆಯ ಹಿಂದಿನ ಸಂಪೂರ್ಣ ಸಂಚು ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Post a Comment

Previous Post Next Post