ಮಂಗಳೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರದಾನಿಸಲಾಗುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಅಧಿಕೃತ ಪಟ್ಟಿ ರಾತ್ರಿ 11 ಗಂಟೆ ಕಳೆದರೂ ಪ್ರಕಟವಾಗದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ, ಮಾನದಂಡ ಹಾಗೂ ಆಡಳಿತದ ಕಾರ್ಯವೈಖರಿಯ ಬಗ್ಗೆಯೇ ಈಗ ಪ್ರಶ್ನೆಗಳು ಎದ್ದಿವೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಜೆ 6 ಗಂಟೆಯೊಳಗೇ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಮಧ್ಯರಾತ್ರಿ ಸಮೀಪಿಸಿದರೂ ಅಧಿಕೃತ ಪಟ್ಟಿ ಹೊರಬಾರದಿರುವುದು ಅಚ್ಚರಿ ಮೂಡಿಸಿದೆ. ಪ್ರಶಸ್ತಿಗೆ ಅರ್ಹರಾದ ಸಾಧಕರನ್ನು ಗುರುತಿಸಿ ಗೌರವಿಸುವ ಪ್ರಕ್ರಿಯೆಯೇ ಕೊನೆಯ ಕ್ಷಣದವರೆಗೂ ಅನಿಶ್ಚಿತತೆಯಲ್ಲಿ ಉಳಿದಿರುವುದು ಪ್ರಶಸ್ತಿಯ ಘನತೆ ಮತ್ತು ಮೌಲ್ಯದ ಮೇಲೆಯೇ ಪರಿಣಾಮ ಬೀರುವಂತಾಗಿದೆ.
ಅಂತಿಮ ಕ್ಷಣದವರೆಗೂ ಹೆಸರು ಸೇರ್ಪಡೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ? ಶಿಫಾರಸು ಮತ್ತು ಲಾಬಿಗಳಿಗೆ ಅವಕಾಶ ನೀಡಲಾಗುತ್ತಿದೆಯೇ? ನಿಜವಾದ ಸಾಧಕರನ್ನು ಗುರುತಿಸುವ ಬದಲು ಪ್ರಭಾವಿಗಳಿಗೆ ಮಣೆ ಹಾಕಲಾಗುತ್ತಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇಂತಹ ಬೆಳವಣಿಗೆಗಳಿಂದ ನಿಜವಾದ ಅರ್ಹತೆ ಮತ್ತು ಸಾಧನೆಯ ಆಧಾರದಲ್ಲಿ ಆಯ್ಕೆಯಾಗಬೇಕಾದ ವ್ಯಕ್ತಿಗಳೂ ಮುಜುಗರ ಅನುಭವಿಸುವಂತಾಗಿದೆ.
ಶತಕ ದಾಟಿದ ವೈಯಕ್ತಿಕ ಪ್ರಶಸ್ತಿಗಳು; ಅರ್ಧಶತಕ ಮೀರಿದ ಸಂಸ್ಥೆಗಳು ! :
ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 71 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಗೆ ವೈಯಕ್ತಿಕ ವಿಭಾಗದಲ್ಲೇ 100ಕ್ಕೂ ಅಧಿಕ ಹೆಸರುಗಳು ಸೇರ್ಪಡೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಸಂಸ್ಥೆಗಳ ವಿಭಾಗದಲ್ಲಿಯೂ ಅರ್ಧಶತಕ ದಾಟಿರುವುದಾಗಿ ತಿಳಿದುಬಂದಿದೆ. ಪ್ರಶಸ್ತಿಗಳ ಸಂಖ್ಯೆ ಇಷ್ಟೊಂದು ಹೆಚ್ಚಾಗಿರುವಾಗ ಆಯ್ಕೆಗೆ ಅನುಸರಿಸಿದ ಮಾನದಂಡಗಳೇನು ಎಂಬ ಪ್ರಶ್ನೆಯೂ ಸಹಜವಾಗಿ ಉದ್ಭವಿಸಿದೆ.
ಕಳೆದ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭದ ಮುಂಜಾನೆಯವರೆಗೂ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆದಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಕಳೆದ ವರ್ಷದ ಅನುಭವದಿಂದ ಪಾಠ ಕಲಿತು ಈ ಬಾರಿ ವ್ಯವಸ್ಥಿತ ಹಾಗೂ ಪಾರದರ್ಶಕ ಆಯ್ಕೆ ಪ್ರಕ್ರಿಯೆ ರೂಪಿಸಬೇಕಿದ್ದ ಜಿಲ್ಲಾಡಳಿತ ಮತ್ತೆ ಅದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆಯೇ ಎಂಬ ಅನುಮಾನ ಮೂಡಿದೆ.
ಉಡುಪಿ ಮಾದರಿ ನಡೆ ಚರ್ಚೆಯಲ್ಲಿ! :
ಇನ್ನೊಂದೆಡೆ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಜಿಲ್ಲಾ ಪ್ರಶಸ್ತಿ ಪ್ರದಾನವನ್ನು ರದ್ದುಗೊಳಿಸಿರುವ ನಿರ್ಧಾರವೂ ಚರ್ಚೆಗೆ ಗ್ರಾಸವಾಗಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದವರಿಗೆ ಇದರಿಂದ ನಿರಾಸೆಯಾಗಿರಬಹುದು. ಆದರೆ ಸೂಕ್ತ ಮಾನದಂಡ ಮತ್ತು ವ್ಯವಸ್ಥಿತ ಆಯ್ಕೆ ಸಾಧ್ಯವಾಗದಿದ್ದಲ್ಲಿ, ಅವಸರದಲ್ಲಿ ಪ್ರಶಸ್ತಿ ವಿತರಿಸುವ ಬದಲಾಗಿ ಪ್ರಕ್ರಿಯೆಯನ್ನು ರದ್ದುಗೊಳಿಸುವುದೇ ಸೂಕ್ತ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಪ್ರಶಸ್ತಿ ಎಂಬುದು ಕೇವಲ ಹೆಸರುಗಳ ಪಟ್ಟಿಯಲ್ಲ; ಅದು ವ್ಯಕ್ತಿಯ ವರ್ಷಗಳ ಸಾಧನೆ, ಪರಿಶ್ರಮ ಮತ್ತು ಸಮಾಜಸೇವೆಗೆ ದೊರೆಯುವ ಗೌರವ. ಇಂತಹ ಗೌರವದ ಆಯ್ಕೆ ಪ್ರಕ್ರಿಯೆಯೇ ಕೊನೆಯ ಕ್ಷಣದವರೆಗೂ ಗೊಂದಲದಲ್ಲಿದ್ದರೆ ಪ್ರಶಸ್ತಿಯ ಘನತೆ ಉಳಿಯುವುದಾದರೂ ಹೇಗೆ ?
ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಿದೆ: ಅರ್ಹತೆಗೆ ಆದ್ಯತೆಯೇ, ಪ್ರಭಾವಕ್ಕೆ ಮನ್ನಣೆಯೇ?
Post a Comment