ಮಂಗಳೂರು, ಅ. 9: ಪ್ರಸ್ತುತ ದಿನಗಳಲ್ಲಿ ಜನರಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದ್ದು, ಮೊಬೈಲ್ ವೀಕ್ಷಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಶಾಖೆ ಹಾಗೂ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 8ರಂದು ನಗರದ ಹೋಟೆಲ್ ಓಷ್ಯನ್ ಪರ್ಲ್ನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮೀಟ್ ದ ಆಥರ್’ ಎಂಬ ಶೈಕ್ಷಣಿಕ ಕಾರ್ಯಾಗಾರದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಎಲ್ಲರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತ ಮಂಡಳಿಗಳು ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಚಿಸಲಾದ ‘ಮ್ಯಾನುವಲ್ ಆಫ್ ಸರ್ಜರಿ’ ಪಠ್ಯಪುಸ್ತಕದ ಖ್ಯಾತ ಲೇಖಕ, ಕೆಎಂಸಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮಾಜಿ ಮುಖ್ಯಸ್ಥ ಡಾ. ಶ್ರೀರಾಮ್ ಭಟ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಸ್ತ್ರಚಿಕಿತ್ಸೆ ಒಂದು ಕಲೆ: ಡಾ. ಶ್ರೀರಾಮ್ ಭಟ್
ವಿದ್ಯೆಗೆ ಅಂತ್ಯವಿಲ್ಲ. ಶಸ್ತ್ರಚಿಕಿತ್ಸೆ ಒಂದು ಕಲೆಯಾಗಿದ್ದು, ಅದರಲ್ಲಿ ಪರಿಣತಿ ಸಾಧಿಸಲು ನಿರಂತರ ಅಧ್ಯಯನ ಮತ್ತು ಅನುಭವ ಅಗತ್ಯ. ಪಠ್ಯಪುಸ್ತಕವೊಂದನ್ನು ರಚಿಸಲು ಅಪಾರ ಶ್ರದ್ಧೆ, ಬದ್ಧತೆ, ಕಠಿಣ ಪರಿಶ್ರಮ, ವಿಶಾಲ ಜ್ಞಾನ ಹಾಗೂ ಸವಾಲುಗಳನ್ನು ಎದುರಿಸುವ ಧೈರ್ಯ ಇರಬೇಕು ಎಂದು ಡಾ. ಶ್ರೀರಾಮ್ ಭಟ್ ಹೇಳಿದರು.
ದೇಶದ ವಿವಿಧ ಆಸ್ಪತ್ರೆಗಳಲ್ಲಿ ಪ್ರಸ್ತುತ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ ಎಂದು ತಿಳಿಸಿದ ಅವರು, ವೈದ್ಯಕೀಯ ಶಿಕ್ಷಣ, ಶಸ್ತ್ರಚಿಕಿತ್ಸೆ ಮತ್ತು ವೃತ್ತಿಪರ ಅನುಭವಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಡಾ. ಶ್ರೀರಾಮ್ ಭಟ್ ರಚಿಸಿರುವ ‘ಮ್ಯಾನುವಲ್ ಆಫ್ ಸರ್ಜರಿ’ ಪಠ್ಯಪುಸ್ತಕವು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದ್ದು, ಇದುವರೆಗೆ 3.50 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ.
ಗಣ್ಯರ ಉಪಸ್ಥಿತಿ
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕೋಶಾಧಿಕಾರಿ ಡಾ. ಜ್ಯೂಲಿಯನ್ ಸಲ್ದಾನಾ, ಮಾಜಿ ಕಾರ್ಯದರ್ಶಿ ಡಾ. ಅವಿನ್ ಆಳ್ವ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಶಶಾಂಕ್ ರಾಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟನಾ ಮುಖ್ಯಸ್ಥ ಸೋಹನ್ ಕುಮಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ್ ಸೆಲ್ವರಾಜ್ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
Post a Comment