ಮಂಗಳೂರಿನಲ್ಲಿ ₹1.63 ಕೋಟಿ ಮೌಲ್ಯದ MDMA ವಶ: ಮೂವರು ಆರೋಪಿಗಳ ಬಂಧನ ; ವಾಟರ್ ಪ್ಯೂರಿಫೈಯರ್‌ನಲ್ಲಿ ಮಾದಕ ವಸ್ತು ಬಚ್ಚಿಟ್ಟು ಕೊರಿಯರ್ ಮೂಲಕ ಸಾಗಾಟ !

ಮಂಗಳೂರು, ಅ. 9: ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತು MDMA ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1 ಕೆಜಿ 796.96 ಗ್ರಾಂ MDMA ಸೇರಿದಂತೆ ಒಟ್ಟು ₹1,63,84,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅ. 8ರಂದು ರಾತ್ರಿ ಸುಮಾರು 10 ಗಂಟೆಗೆ ಖಚಿತ ಮಾಹಿತಿಯ ಮೇರೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಸಮೀಪ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ₹1.58 ಕೋಟಿಗೂ ಅಧಿಕ ಮೌಲ್ಯದ MDMA, ಮೂರು ಮೊಬೈಲ್ ಫೋನ್‌ಗಳು, ಸಾಗಾಟಕ್ಕೆ ಬಳಸಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾ, ಕೊರಿಯರ್ ರಟ್ಟಿನ ಪೆಟ್ಟಿಗೆ ಹಾಗೂ ವಾಟರ್ ಪ್ಯೂರಿಫೈಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಗಳ ಹಿನ್ನೆಲೆ :
ಬಂಧಿತರನ್ನು ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಅಬ್ದುಲ್ ಹಾಪೀಲ್ (25), ಮಂಗಳೂರು ಕಸಬಾ ಬೆಂಗ್ರೆಯ ಜಿಯಾವುಲ್ ಹಕ್ (30) ಹಾಗೂ ಪಾಂಡೇಶ್ವರ ನಿವಾಸಿ ಅಲ್ತಾಫ್ (28) ಎಂದು ಗುರುತಿಸಲಾಗಿದೆ.

ಅಬ್ದುಲ್ ಹಾಪೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು. ಜಿಯಾವುಲ್ ಹಕ್ ದುಬೈನ ರಸ್ ಅಲ್ ಖೈಮಾದಲ್ಲಿ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ತಾಫ್ ವಿರುದ್ಧವೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು.

ವಾಟರ್ ಪ್ಯೂರಿಫೈಯರ್‌ನಲ್ಲಿ MDMA ಬಚ್ಚಿಟ್ಟು ಸಾಗಾಟ :
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಪಂಜಾಬ್‌ನ ಅಮೃತಸರದಿಂದ MDMA ಖರೀದಿಸಿ, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಭಾಗದಲ್ಲಿ ಬಚ್ಚಿಟ್ಟು ಕೊರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿದ್ದರು. ಬಳಿಕ ಈ ಮಾದಕ ವಸ್ತುವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಸಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಪ್ರಕರಣದ ಕುರಿತು ಉಳ್ಳಾಲ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Post a Comment

Previous Post Next Post