ಮಂಗಳೂರಿನಲ್ಲಿ ‘ಕುಡ್ಲದ ಪಿಲಿಪರ್ಬ–2026’ ಚಪ್ಪರ ಮುಹೂರ್ತ ; ಅ.18ರಂದು ಐದನೇ ವರ್ಷದ ಹುಲಿವೇಷ ಸ್ಪರ್ಧೆ; ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅನಾವರಣ


ಮಂಗಳೂರು: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುತ್ತಿರುವ ಐದನೇ ವರ್ಷದ ‘ಕುಡ್ಲದ ಪಿಲಿಪರ್ಬ–2026’ರ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, “ದಸರಾ ಸಂದರ್ಭದಲ್ಲಿ ಇಡೀ ತುಳುನಾಡಿನಲ್ಲಿ ಹುಲಿವೇಷದ ಸಂಭ್ರಮ ಮನೆಮಾಡುತ್ತದೆ. ನಮ್ಮ ನೆಲದ ಈ ವಿಶಿಷ್ಟ ಕಲೆಯು ತುಳುನಾಡಿನ ಗಡಿಗಳನ್ನು ದಾಟಿ ದೇಶ-ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿರುವುದು ಹೆಮ್ಮೆಯ ಸಂಗತಿ. ಈ ಕಲೆಗೆ ಮತ್ತಷ್ಟು ಮೆರುಗು ನೀಡುವ ಉದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಪಿಲಿಪರ್ಬ ಆಯೋಜಿಸಲಾಗುತ್ತಿದೆ,” ಎಂದರು.

ಅಕ್ಟೋಬರ್ 18ರ ಭಾನುವಾರದಂದು ನಡೆಯಲಿರುವ ಐದನೇ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಈ ಪರಂಪರೆಯನ್ನು ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲ ಹುಲಿವೇಷ ತಂಡಗಳಿಗೂ ಶುಭ ಹಾರೈಸಿದ ಶಾಸಕರು, ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ಆಹ್ವಾನಿಸಿದರು. ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಮಲಾಕ್ಷ ಬಜಿಲಕೇರಿ, ಕಿರಣ್ ಶೆಣೈ, ನರೇಶ್ ಪ್ರಭು, ಜಗದೀಶ್ ಕದ್ರಿ, ಲಲಿತ್ ಮೆಂಡನ್ ಸೇರಿದಂತೆ ಪ್ರತಿಷ್ಠಾನದ ಹಲವು ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Post a Comment

Previous Post Next Post