ಅ.18ರಂದು ಮಂಗಳೂರಿನಲ್ಲಿ ಐದನೇ ಆವೃತ್ತಿಯ ‘ಕುಡ್ಲದ ಪಿಲಿಪರ್ಬ’ ; 11 ಹುಲಿವೇಷ ತಂಡಗಳಿಂದ ಪ್ರದರ್ಶನ

ಮಂಗಳೂರು: ಕರಾವಳಿಯ ಜನಪ್ರಿಯ ಹುಲಿವೇಷ ಸಂಭ್ರಮದ ಐದನೇ ಆವೃತ್ತಿಯ ‘ಕುಡ್ಲದ ಪಿಲಿಪರ್ಬ’  ಅಕ್ಟೋಬರ್ 18ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧಾಕೂಟವು ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಸ್ಪರ್ಧಾಕೂಟ ಆರಂಭವಾಗಲಿದ್ದು, ಕರಾವಳಿಯ 11 ಜನಪ್ರಿಯ ಹುಲಿವೇಷ ತಂಡಗಳು ಭಾಗವಹಿಸಲಿವೆ. ಪ್ರತಿಯೊಂದು ತಂಡವೂ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಪ್ರವೇಶಿಸಿ 20 ನಿಮಿಷಗಳ ಕಾಲ ಪ್ರದರ್ಶನ ನೀಡಲಿದೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿ, ಮರಿಹುಲಿ, ಹಿಮ್ಮೇಳ ಹಾಗೂ ಧರಣಿ ಮಂಡಲ ಸೇರಿದಂತೆ ವಿವಿಧ ಆಕರ್ಷಣೆಗಳು ಪಿಲಿಪರ್ಬಕ್ಕೆ ಮೆರುಗು ನೀಡಲಿವೆ ಎಂದರು.

ಆರು ಮಂದಿ ತೀರ್ಪುಗಾರರು :
ಸ್ಪರ್ಧೆಯ ಮೌಲ್ಯಮಾಪನಕ್ಕಾಗಿ ಆರು ಮಂದಿ ತೀರ್ಪುಗಾರರನ್ನು ನೇಮಿಸಲಾಗಿದೆ. ನಾಲ್ವರು ವೇದಿಕೆಯಲ್ಲಿ ತೀರ್ಪು ನೀಡಲಿದ್ದು, ಇನ್ನಿಬ್ಬರು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಥರ್ಡ್ ಅಂಪೈರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡಗಳು ವೇದಿಕೆಗೆ ಆಗಮಿಸುವುದರಿಂದ ಹಿಡಿದು ಪ್ರದರ್ಶನ ಮುಗಿಸಿ ನಿರ್ಗಮಿಸುವವರೆಗಿನ ಎಲ್ಲ ದೃಶ್ಯಗಳನ್ನು ವಿಡಿಯೋದಲ್ಲಿ ದಾಖಲಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮರುಪ್ರಸಾರ ವೀಕ್ಷಿಸಿದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.

ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಇದರೊಂದಿಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ ಹಾಗೂ ಧರಣಿ ಮಂಡಲ ವಿಭಾಗಗಳಲ್ಲಿಯೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಪ್ರತಿಯೊಂದು ಹುಲಿವೇಷ ತಂಡಕ್ಕೂ ಗೌರವಧನ ನೀಡುವ ವ್ಯವಸ್ಥೆ ಮಾಡಲಾಗಿದೆ.

5 ಸಾವಿರ ಪ್ರೇಕ್ಷಕರಿಗೆ ಗ್ಯಾಲರಿ : ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ರಾಜ್ಯದ ಗಣ್ಯರು ಆಗಮಿಸಲಿದ್ದು, ಅವರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿಯನ್ನು ಕೇಂದ್ರ ಮೈದಾನದಲ್ಲಿ ನಿರ್ಮಿಸಲಾಗಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಮನೆಯಲ್ಲಿಯೇ ಕುಳಿತು ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗುವುದು.

ಪ್ರೇಕ್ಷಕರ ಅನುಕೂಲಕ್ಕಾಗಿ ಅಚ್ಚುಕಟ್ಟಾದ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮವು ನಿಗದಿತ ಸಮಯಕ್ಕೆ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.

ಭಾಗವಹಿಸುವ 11 ಹುಲಿವೇಷ ತಂಡಗಳು :
1. ಹನುಮಾನ್ ಟೈಗರ್ಸ್, ಉಪ್ಪಳ
2. ಪಾಂಡೇಶ್ವರ ಶಾರದಾ ಹುಲಿ
3. ಶಿವಶಕ್ತಿ ಟೈಗರ್ಸ್, ಕುಂಜತ್ತೂರು ಮಂಜೇಶ್ವರ
4. ಕೊಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್
5. ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್
6. ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ
7. ಟ್ಯಾಲೆಂಟ್ ಟೈಗರ್ಸ್ MYB ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು
8. ಫ್ರೆಂಡ್ಸ್ ಅಂಗಾರಗುಡ್ಡೆ ಟೈಗರ್ಸ್, ಮುಲ್ಕಿ
9. ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್
10. ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ
11. ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ

ಪತ್ರಿಕಾಗೋಷ್ಠಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ನರೇಶ್ ಶೆಣೈ, ನವನೀತ್ ಶೆಟ್ಟಿ ಕದ್ರಿ, ಕಿರಣ್ ಶೆಣೈ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಹಾಗೂ ಚೇತನ್ ಕಾಮತ್ ಉಪಸ್ಥಿತರಿದ್ದರು.

Post a Comment

Previous Post Next Post