ಮಂಗಳೂರು ದಸರಾ : ಅ.15ರಂದು ಕುದ್ರೋಳಿ ಕ್ಷೇತ್ರಕ್ಕೆ ಮುಖ್ಯಮಂತ್ರಿ ಭೇಟಿ ಹಿನ್ನೆಲೆ ಸಂಜೆ 4ರಿಂದ ರಾತ್ರಿ 8ರವರೆಗೆ ವಾಹನ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ; ಸಾರ್ವಜನಿಕರಿಗೆ ಪೊಲೀಸ್ ಸೂಚನೆ



ಮಂಗಳೂರು : ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಅ.15ರಂದು ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಲಿರುವುದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರ ಸಲಹೆ ಪ್ರಕಟಿಸಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಸೂಚಿಸಿದೆ.

ಗಣ್ಯರ ಭದ್ರತೆ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಅ.15ರಂದು ಸಂಜೆ 4 ಗಂಟೆಯಿಂದ ನಗರದಲ್ಲಿ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ನಿರೀಕ್ಷೆಯಿದೆ.

ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವ ರಸ್ತೆಗಳು :
- ಕೆ.ಪಿ.ಟಿ. ವೃತ್ತದಿಂದ ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್ ಮೂಲಕ ನಾರಾಯಣಗುರು ವೃತ್ತದವರೆಗೆ.
- ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ, ದುರ್ಗಾಮಹಲ್ ಜಂಕ್ಷನ್, ಕುದ್ರೋಳಿ ದೇವಸ್ಥಾನ, ಅಳಕೆ ಸೇತುವೆ ಹಾಗೂ ನ್ಯೂ ಚಿತ್ರಾ ಜಂಕ್ಷನ್ ಕಡೆಗೆ ಸಾಗುವ ರಸ್ತೆಗಳು.

ಸಂಜೆ 4ರಿಂದ ರಾತ್ರಿ 8ರವರೆಗೆ ಸಂಚಾರ ನಿರ್ಬಂಧದ ಸಾಧ್ಯತೆ :
ಅ.15ರಂದು ಸಂಜೆ 4ರಿಂದ ರಾತ್ರಿ 8ರವರೆಗೆ ನ್ಯೂ ಚಿತ್ರಾ ಜಂಕ್ಷನ್‌ನಿಂದ ದುರ್ಗಾಮಹಲ್ ಜಂಕ್ಷನ್‌ವರೆಗೆ ಹಾಗೂ ದುರ್ಗಾಮಹಲ್ ಜಂಕ್ಷನ್‌ನಿಂದ ನ್ಯೂ ಚಿತ್ರಾ ಜಂಕ್ಷನ್‌ವರೆಗೆ ವಾಹನಗಳಲ್ಲಿ ಸಂಚರಿಸದಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಈ ಅವಧಿಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕು.

ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು :
- ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ ಅಥವಾ ಮಾರ್ಗ ಬದಲಾವಣೆ ಜಾರಿಯಾಗಬಹುದು. ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು.
- ಗಣ್ಯರು ಸಂಚರಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು.
- ಅನಗತ್ಯ ವಾಹನ ದಟ್ಟಣೆ ಉಂಟಾಗದಂತೆ ಸಹಕರಿಸಬೇಕು. ತುರ್ತು ಪ್ರಯಾಣಗಳಿಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು.
- ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡುವ ಸಾರ್ವಜನಿಕರು ಮಣ್ಣಗುಡ್ಡೆ ಮತ್ತು ಗಾಂಧಿನಗರದ ಅಡ್ಡ ರಸ್ತೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.
- ನಿಗದಿತ ಅವಧಿಯಲ್ಲಿ ಕುದ್ರೋಳಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಗೆ ಅವಕಾಶವಿರುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Post a Comment

Previous Post Next Post