Mangalore Yakshavaibhava | ಭ್ರಾಮರೀ ಯಕ್ಷ ವೈಭವದಲ್ಲಿ ಯಕ್ಷಗಾನದ ಸಡಗರ ; ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈಗೆ ‘ಯಕ್ಷಮಣಿ’ ಪ್ರಶಸ್ತಿ ಪ್ರದಾನ

ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ 9ನೇ ವರ್ಷದ ‘ಭ್ರಾಮರೀ ಯಕ್ಷ ವೈಭವ’ ಕಾರ್ಯಕ್ರಮ ಶನಿವಾರ ರಾತ್ರಿ ಆರಂಭಗೊಂಡು ರವಿವಾರ ಮುಂಜಾನೆವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂಭ್ರಮದಿಂದ ನಡೆಯಿತು.

ಸಹಕಾರಿ ಧುರೀಣ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಜಿ. ರಾಜರಾಮ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತೆಂಕುತಿಟ್ಟು, ಬಡಗುತಿಟ್ಟು ಸೇರಿದಂತೆ ಯಾವುದೇ ತಿಟ್ಟಿನ ಯಕ್ಷಗಾನವಾದರೂ ಸವಿಯದವರು ಕರಾವಳಿಯಲ್ಲಿ ಇಲ್ಲ. ಯಕ್ಷಗಾನದಲ್ಲಿ ಇಂದು ಹಲವು ಹೊಸತನಗಳು ಬಂದಿದ್ದು, ಜನರೂ ಅದನ್ನು ಮೆಚ್ಚಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಭ್ರಾಮರೀ ಯಕ್ಷಮಿತ್ರರು ಯಕ್ಷಗಾನ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ ಎಂದು ಅವರು ಹೇಳಿದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಯಕ್ಷಗಾನ ಹಾಗೂ ನಾಟಕದಂತಹ ಸಾಂಸ್ಕೃತಿಕ ಕ್ಷೇತ್ರಗಳಿಗೆ ಹಿನ್ನೆಲೆಯಿಂದ ರೂಪ ನೀಡುವ ನೇಪಥ್ಯ ಕಲಾವಿದರನ್ನು ಬಹುತೇಕ ಸಂದರ್ಭಗಳಲ್ಲಿ ಮರೆಯಲಾಗುತ್ತದೆ. ಆದರೆ ಭ್ರಾಮರೀ ಯಕ್ಷಮಿತ್ರರು ನೇಪಥ್ಯ ಕಲಾವಿದರನ್ನೂ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಉದ್ಯಮಿ ರಾಜಶೇಖರ ಕೋಟ್ಯಾನ್ ಮಾತನಾಡಿ, ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಮಕ್ಕಳಿಗೆ ಯಕ್ಷಗಾನದ ಪರಿಚಯ ಮಾಡಿಸುವ ಕಾರ್ಯವಾಗಬೇಕು ಎಂದರು.

ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಮಾತನಾಡಿ, ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಬ್ರಾಮರೀ ಯಕ್ಷಮಿತ್ರರು ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜಿ.ಕೆ. ಭಟ್ ಸೆರಾಜೆ ಮಾತನಾಡಿ, ಯಕ್ಷಗಾನಕ್ಕೆ ವಿವಿಧ ಆಯಾಮಗಳಲ್ಲಿ ಪೋಷಣೆ ಹಾಗೂ ಸಹಕಾರ ನೀಡುವ ದೊಡ್ಡ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಸಂಸ್ಥೆ ಮಾದರಿಯಾಗಿ ಬೆಳೆದಿದ್ದು, ದಶಮಾನೋತ್ಸವ ಕಾರ್ಯಕ್ರಮವೂ ಇದೇ ರೀತಿ ಸಂಭ್ರಮದಿಂದ ನಡೆಯಲಿ ಎಂದು ಹಾರೈಸಿದರು.

ಪ್ರಶಸ್ತಿ ಪ್ರದಾನ
ಹಿರಿಯ ಕಲಾವಿದ ಕೆ.ಎಚ್. ದಾಸಪ್ಪ ರೈ ಅವರಿಗೆ ‘ಭ್ರಾಮರೀ ಯಕ್ಷಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೇಪಥ್ಯ ಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

ಬಳಗದ ಸದಸ್ಯರಾಗಿದ್ದ ರಮೇಶ್ ರೈ ತಲಪಾಡಿ ದೊಡ್ಡಮನೆ, ಯಕ್ಷಧ್ರುವಪಟ್ಲ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಹಾಪ್‌ಕಾಮ್ಸ್ ವ್ಯವಸ್ಥಾಪಕರಾಗಿದ್ದ ರವಿಚಂದ್ರ ಶೆಟ್ಟಿ ಅಶೋಕನಗರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಟ್ರಸ್ಟ್‌ನ ಪ್ರಮುಖರಾದ ಸತೀಶ್ ಮಂಜೇಶ್ವರ ಸ್ವಾಗತಿಸಿದರು. ವಿನಯ ಕೃಷ್ಣ ಕುರ್ನಾಡು ವಂದಿಸಿದರು. ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಬಾಶಪಥ’, ‘ಲಕ್ಷ್ಮೀ ಸ್ವಯಂವರ’ ಹಾಗೂ ‘ತಾಮ್ರಧ್ವಜ ಕಾಳಗ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು.

Post a Comment

Previous Post Next Post