ಮಂಗಳೂರು, ಆ.11: ಜಿಲ್ಲೆಯ ಪತ್ರಕರ್ತರ ಸಂಶೋಧನಾ ಪ್ರವೃತ್ತಿ ಪತ್ರಕರ್ತರ ವೃತ್ತಿಗೆ ಘನತೆಯನ್ನು ತಂದುಕೊಟ್ಟಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2026ನೇ ಸಾಲಿನ ಪ.ಗೋ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತ್ರಕರ್ತರ ಕೆಲವು ವರದಿಗಳು, ಪುಸ್ತಕಗಳು ಯಾವುದೇ ಸಂಶೋಧನಾ ಬರಹಗಳಿಗೂ ಕಡಿಮೆಯಿಲ್ಲ. ಭಾಷಾ ಬೆಳವಣಿಗೆಯ ದೃಷ್ಟಿಯಿಂದಲೂ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ. ಪತ್ರಕರ್ತರ ಕನ್ನಡ ಭಾಷೆಯ ಬಳಕೆ ಅನುಕರಣೀಯವಾಗಿದ್ದು, ಕನ್ನಡ ಭಾಷೆಯನ್ನು ಬೆಳೆಸುವ ಚಳವಳಿಯ ಭಾಗವಾಗಿಯೂ ಇಲ್ಲಿನ ಪತ್ರಕರ್ತರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಎಂದರು.
ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಶುದ್ದೀನ್ ಅವರ ವಿಶೇಷ ವರದಿಯಲ್ಲಿಯೂ ಅವರು ಬಳಸಿರುವ ಭಾಷೆ ಹಾಗೂ ವಿಷಯ ಮಂಡನೆ ಸರ್ಕಾರವನ್ನು ಎಚ್ಚರಿಸುವ ಉತ್ತಮ ಪ್ರಯತ್ನವಾಗಿದೆ. ಜಿಲ್ಲೆಯ ಕನ್ನಡ ಪತ್ರಕರ್ತರ ಭಾಷಾ ಪ್ರಯೋಗಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಹೊಸ ಹೊಸ ಶಬ್ದಗಳ ಪ್ರಯೋಗಗಳನ್ನು ಗಮನಿಸಿದ್ದೇನೆ ಎಂದು ಪ್ರೊ. ಧರ್ಮ ಹೇಳಿದರು.
ಖಾಸಗೀಕರಣದ ಭರಾಟೆಯ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿಯೂ, ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರು ಸೇರಿದಂತೆ ಅವರಿಗಿಂತಲೂ ತಳಮಟ್ಟದ ಜೀವನ ನಡೆಸುತ್ತಿರುವ ಹಲವು ಸಮುದಾಯಗಳು ಹಾಗೂ ಕುಟುಂಬಗಳಿಗೆ ಸರ್ಕಾರಿ ಸಂಸ್ಥೆಗಳು ಮತ್ತು ಶಿಕ್ಷಣ ಕ್ಷೇತ್ರಗಳು ಇಂದಿಗೂ ಆಶಾಕಿರಣವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶುದ್ದೀನ್, “ಈ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅವಕಾಶ ವಂಚಿತ ಮೂಲ ನಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಸಹಾಯ ಅಗತ್ಯವಾಗಿ ದೊರೆಯಬೇಕು” ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ಪದ್ಯಾಣ ಗೋಪಾಲ ಕೃಷ್ಣ (ಪ.ಗೋ.) ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ಸೌಲಭ್ಯಗಳ ಕೊರತೆಯಿದ್ದ ಕಾಲದಲ್ಲಿಯೂ ಪ.ಗೋ. ಅವರು ತಮ್ಮ ವೃತ್ತಿಯಲ್ಲಿ ಜಾತಿ, ಧರ್ಮ, ಭಾಷೆಯ ಆಧಾರದಲ್ಲಿ ಯಾವುದೇ ವ್ಯತ್ಯಾಸ ಮಾಡುತ್ತಿರಲಿಲ್ಲ. ಅವರ ಹೆಸರಿನಲ್ಲಿ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ.ಗೋ. ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಪ್ರಯೋಗಶೀಲ ಪತ್ರಕರ್ತರಾಗಿದ್ದ ಪ.ಗೋ. ಅವರು ಜಿಲ್ಲೆ ಹಾಗೂ ರಾಜ್ಯದ ಗಡಿಗಳನ್ನು ಮೀರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದವರು ಎಂದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ಅನ್ನು ಮಂಗಳೂರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ವಂದಿಸಿದರು. ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.
Post a Comment