ಆಟಿ ಆಚರಣೆಗಿದೆ ವೈಜ್ಞಾನಿಕ ಹಾಗೂ ವೈದ್ಯಕೀಯ ಮಹತ್ವ: ಡಾ. ಸತೀಶ್ ಕುಮಾರ್ ಭಂಡಾರಿ


ಮಂಗಳೂರು, ಆಗಸ್ಟ್ 11: ತುಳುನಾಡಿನ ಆಟಿ ಆಚರಣೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವದ ಜತೆಗೆ ವೈಜ್ಞಾನಿಕ ಮತ್ತು ವೈದ್ಯಕೀಯ ಮಹತ್ವವೂ ಇದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.

ಕರಾವಳಿ ಪ್ರದೇಶದ ತುಳುನಾಡಿನ ವಂಶಜರು ಪ್ರಾಚೀನ ಕಾಲದಿಂದಲೂ ಕೃಷಿ ಹಾಗೂ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಪ್ರಕೃತಿ ಆರಾಧಕರಾಗಿದ್ದ ಅವರು ಹವಾಮಾನ ಬದಲಾವಣೆ ಹಾಗೂ ಪರಿಸರದ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಹಲವು ಆಚರಣೆಗಳು ಮತ್ತು ಆಹಾರ ಪದ್ಧತಿಗಳನ್ನು ರೂಢಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಟಿ ಆಚರಣೆಯ ಹಿಂದೆ ಆರೋಗ್ಯ ಸಂರಕ್ಷಣೆಯ ವೈಜ್ಞಾನಿಕ ದೃಷ್ಟಿಕೋನವೂ ಅಡಕವಾಗಿದೆ ಎಂದು ಅವರು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ನಗರದ ಡಾ. ಎ.ವಿ. ರಾವ್ ಸಭಾಂಗಣದಲ್ಲಿ ಆಗಸ್ಟ್ 10ರಂದು ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಟಿ ಆಚರಣೆಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಪ್ರದಾಯವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರ ಜವಾಬ್ದಾರಿ ಯುವಜನಾಂಗದ ಮೇಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತುಳು ಭಾಷಾ ವಿದ್ವಾಂಸ ಕೆ.ಕೆ. ಪೇಜಾವರ ಅವರು ಆಟಿ ಆಚರಣೆಯ ಪ್ರಾಮುಖ್ಯತೆ, ನೈಜ ಉದ್ದೇಶ, ಆಚಾರ-ವಿಚಾರಗಳು ಹಾಗೂ ಪ್ರಸ್ತುತ ಎದುರಾಗುತ್ತಿರುವ ಸವಾಲುಗಳ ಕುರಿತು ಮಾತನಾಡಿದರು. ಆಟಿ ತಿಂಗಳಲ್ಲಿ ಬಳಸಲಾಗುತ್ತಿದ್ದ ಔಷಧೀಯ ಗುಣ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ವಿವಿಧ ನೈಸರ್ಗಿಕ ಆಹಾರ ಪದಾರ್ಥಗಳು, ತಿಂಡಿ-ತಿನಿಸುಗಳು, ಪಾನಕ, ಪಾನೀಯಗಳು, ಪಾಯಸ ಮತ್ತು ಕಷಾಯಗಳ ಮಹತ್ವವನ್ನು ವಿವರಿಸಿದರು.

ಕನ್ನಡ ಭಾಷಾ ವಿದ್ವಾಂಸ ದಾಮೋದರ್ ಶರ್ಮ ಮಾತನಾಡಿ, ಆಟಿ ಮಾಸದಲ್ಲಿ ಪ್ರಕೃತಿ ಆರಾಧನೆ, ಭೂತಾರಾಧನೆ, ದೈವಾರಾಧನೆ ಹಾಗೂ ನಾಗದೇವತೆಯ ಆರಾಧನೆಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತಿತ್ತು ಎಂದು ತಿಳಿಸಿದರು.

ಆಟಿ ಆಚರಣೆ ಕುಟುಂಬದ ಸದಸ್ಯರ ನಡುವೆ ಒಗ್ಗಟ್ಟು ಮತ್ತು ಬಾಂಧವ್ಯವನ್ನು ವೃದ್ಧಿಸುವುದರ ಜತೆಗೆ ಜಾತಿ-ಮತ ಭೇದವಿಲ್ಲದೆ ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಹೀಗಾಗಿ ಆಟಿ ಆಚರಣೆ ಕೇವಲ ಧಾರ್ಮಿಕ ಸಂಪ್ರದಾಯವಾಗಿರದೆ, ಸಾಮಾಜಿಕವಾಗಿ ಅರ್ಥಪೂರ್ಣವಾದ ಆಚರಣೆಯಾಗಿತ್ತು ಎಂದು ಅವರು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ವೇದಿಕೆಯಲ್ಲಿ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ಹಾಗೂ ಕೋಶಾಧಿಕಾರಿ ಡಾ. ಜ್ಯುಲಿಯನ್ ಸಲ್ದಾನಾ ಉಪಸ್ಥಿತರಿದ್ದರು. ಅಕ್ಷತಾ ಮತ್ತು ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.

ಮನರಂಜನಾ ಕಾರ್ಯಕ್ರಮದ ಅಂಗವಾಗಿ ‘ಸು ಫ್ರಮ್ ಸೋ’ ಕನ್ನಡ ಚಲನಚಿತ್ರ ತಂಡದ ಕಲಾವಿದರಾದ ಜೆಪಿ ತುಮಿನಾಡ್, ಪುಷ್ಪರಾಜ್ ಬಲ್ಲಾಳ್ ಹಾಗೂ ಶನಿಲ್ ಗೌತಮ್ ಅವರು ಸಭಿಕರೊಂದಿಗೆ ಸಂವಾದ ನಡೆಸಿದರು.

Post a Comment

Previous Post Next Post