ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ 2 ವರ್ಷ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ಮಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಜೂನ್ 23ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಅ.ಕ್ರ. 79/2025 (ಪೋಕ್ಸೋ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ - BNS ಅಡಿಯಲ್ಲಿ) ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪಿಎಸ್‌ಐ ಕೀರಪ್ಪ ಘಟಕಾಂಬಳೆ ಹಾಗೂ ಪಿಎಸ್‌ಐ ಕೃಷ್ಣಕಾಂತ ಪಾಟೀಲ್ ನಡೆಸಿ, ಆರೋಪಿತ ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ FTSC-I ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಜುಲೈ 31, 2026ರಂದು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ ವಿವಿಧ ಕಲಂಗಳಡಿ ಶಿಕ್ಷೆ ವಿಧಿಸಿದ್ದಾರೆ.
ವಿಧಿಸಲಾದ ಶಿಕ್ಷೆಗಳು
*BNS ಕಲಂ 74 r/w 62: 2 ವರ್ಷ 6 ತಿಂಗಳ ಜೈಲು ಹಾಗೂ ₹15,000 ದಂಡ.
*BNS ಕಲಂ 75(2)(3) r/w 62: 1 ವರ್ಷದ ಜೈಲು ಹಾಗೂ ₹10,000 ದಂಡ.
*BNS ಕಲಂ 79: 1 ವರ್ಷದ ಜೈಲು ಹಾಗೂ ₹5,000 ದಂಡ.
*ಪೋಕ್ಸೋ ಕಾಯ್ದೆ-2012ರ ಕಲಂ 12 r/w 18: 1 ವರ್ಷದ ಜೈಲು ಹಾಗೂ ₹10,000 ದಂಡ.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrent) ಜಾರಿಯಾಗಲಿದ್ದು, ಆರೋಪಿಗೆ ಒಟ್ಟು 2 ವರ್ಷ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹40,000 ದಂಡ ವಿಧಿಸಲಾಗಿದೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
Post a Comment