Vijaypur Airport | ವಿಜಯಪುರದಿಂದ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ! ಸುಪ್ರೀಂ ತೀರ್ಪಿನೊಂದಿಗೆ ಜನರ ಬಹುವರ್ಷಗಳ ಕನಸು ನನಸಾಗುವ ಕ್ಷಣ ಸಮೀಪ

ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಹಲವು ವರ್ಷಗಳ ಕನಸಾಗಿದ್ದ ವಿಮಾನಯಾನ ಸೇವೆ ಆರಂಭಗೊಳ್ಳುವ ದಿನಗಳು ಇದೀಗ ಸಮೀಪಿಸುತ್ತಿವೆ. ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿದ್ದರೂ ಪರಿಸರ ಸಂಬಂಧಿತ ಅಡೆತಡೆಗಳಿಂದ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಆ ಅಡೆತಡೆ ನಿವಾರಣೆ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ವಿಮಾನಗಳ ಹಾರಾಟ ಆರಂಭವಾಗುವ ನಿರೀಕ್ಷೆ ಮೂಡಿದೆ.

ಪ್ರವಾಸೋದ್ಯಮ, ತೋಟಗಾರಿಕೆ ಉತ್ಪನ್ನಗಳ ರಫ್ತು ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶದಿಂದ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆಗೆ 2009ರಲ್ಲೇ ಸರ್ಕಾರ ಸ್ಪಂದಿಸಿತ್ತು. ವಿಜಯಪುರ ನಗರದಿಂದ ಸುಮಾರು 10 ಕಿ.ಮೀ. ದೂರದ ಮದಭಾವಿ–ಬುರಾಣಪುರ ಮಧ್ಯೆ 727 ಎಕರೆ ಭೂಮಿಯನ್ನು 2008ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಕಾಮಗಾರಿ ವಹಿಸಿಕೊಂಡಿದ್ದ ಕಂಪನಿ ಹಿಂದೆ ಸರಿದ ಪರಿಣಾಮ ಯೋಜನೆ ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿತ್ತು.

2023ರಲ್ಲಿ ವಿಜಯಪುರ ಜಿಲ್ಲೆಯವರೇ ಆದ ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಶೇಷ ಆಸಕ್ತಿ ವಹಿಸಿ ಯೋಜನೆಗೆ ಮರುಚೈತನ್ಯ ನೀಡಿದರು. ವಿಮಾನಗಳ ರಾತ್ರಿ ಕಾರ್ಯಾಚರಣೆಗೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಚತುಷ್ಪಥ ಅಪ್ರೋಚ್ ರಸ್ತೆ ನಿರ್ಮಾಣ ಹಾಗೂ ಹೆಚ್ಚುವರಿ ಅನುದಾನ ಒದಗಿಸುವ ಮೂಲಕ ಯೋಜನೆಗೆ ವೇಗ ನೀಡಿದರು. ಇದರ ಪರಿಣಾಮವಾಗಿ ಒಟ್ಟು 618.75 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿ 2023ರಲ್ಲೇ ಪೂರ್ಣಗೊಂಡಿತು.

ನಿಲ್ದಾಣ ಸಂಪೂರ್ಣ ಸಜ್ಜು :
ಎರಡು ಪ್ಯಾಕೇಜ್‌ಗಳಲ್ಲಿ ಕೈಗೊಂಡ ಕಾಮಗಾರಿಯಲ್ಲಿ ರನ್‌ವೇ, ಟರ್ಮಿನಲ್ ಕಟ್ಟಡ, ಸಿವಿಲ್ ಕಾಮಗಾರಿಗಳು, ವಿದ್ಯುತ್ ವ್ಯವಸ್ಥೆ, 24x7 ನೀರು ಪೂರೈಕೆ, ಅಗ್ನಿಶಾಮಕ ವಾಹನಗಳ ಖರೀದಿ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯಗಳು ಪೂರ್ಣಗೊಂಡಿದ್ದು, ಹಗಲು ಹಾಗೂ ರಾತ್ರಿ ಎರಡೂ ವೇಳೆಯಲ್ಲೂ ವಿಮಾನಗಳ ಕಾರ್ಯಾಚರಣೆಗೆ ನಿಲ್ದಾಣ ಸಿದ್ಧವಾಗಿದೆ.

ಪ್ರವಾಸೋದ್ಯಮ ಹಾಗೂ ರಫ್ತಿಗೆ ಹೊಸ ಚೈತನ್ಯ :
ವಿಮಾನ ನಿಲ್ದಾಣ ಆರಂಭವಾದ ಬಳಿಕ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರಿಗೆ ವೇಗವಾದ ಸಂಚಾರ ಸೌಲಭ್ಯ ದೊರೆಯಲಿದ್ದು, ಎರಡೂ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ಸಿಗಲಿದೆ. ಜೊತೆಗೆ ಕಾರ್ಗೋ ಸೇವೆ ಆರಂಭವಾದರೆ ದ್ರಾಕ್ಷಿ, ನಿಂಬೆ, ದಾಳಿಂಬೆ ಸೇರಿದಂತೆ ರಫ್ತು ಗುಣಮಟ್ಟದ ತೋಟಗಾರಿಕೆ ಉತ್ಪನ್ನಗಳನ್ನು ದೇಶ-ವಿದೇಶಗಳಿಗೆ ಸುಲಭವಾಗಿ ಸಾಗಿಸಲು ಅವಕಾಶ ಸಿಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

Post a Comment

Previous Post Next Post