ಹೊಸ ದಿಗಂತ ಪತ್ರಿಕೆ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿಗೆ ‘ನಾರದ ಪುರಸ್ಕಾರ’ ಪ್ರಶಸ್ತಿ

ಮಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ನಾರದ ಪುರಸ್ಕಾರ’ ಪ್ರಶಸ್ತಿಗೆ ಹೊಸ ದಿಗಂತ ಪತ್ರಿಕೆಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 4ರಂದು ಸಂಜೆ 4 ಗಂಟೆಗೆ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.

ಈ ವರ್ಷ ಒಟ್ಟು ಒಂಬತ್ತು ಮಂದಿ ಪತ್ರಕರ್ತರಿಗೆ ‘ನಾರದ ಪುರಸ್ಕಾರ’ ಪ್ರದಾನ ಮಾಡಲಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಡಿ. ಪಳ್ಳಿ ಅವರು ಕಳೆದ 19 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ವರದಿಗಾರಿಕೆಯಲ್ಲಿ ಸಲ್ಲಿಸಿದ ವಿಶೇಷ ಸೇವೆಗಾಗಿ 2013ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪ.ಗೋ ಪ್ರಶಸ್ತಿ) ಹಾಗೂ ಸಮಾಜದಲ್ಲಿ ಸೌಹಾರ್ದತೆ ಪ್ರತಿಬಿಂಬಿಸುವ ವಿಶೇಷ ವರದಿಗಾಗಿ 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಪಡೆದು ಗೌರವಿಸಲ್ಪಟ್ಟಿದ್ದಾರೆ.

Post a Comment

Previous Post Next Post