Gang Rape Case | ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣ ; ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಮಂಗಳೂರು: 2018ರಲ್ಲಿ ಪಣಂಬೂರು ಸಮೀಪದ ತೋಟ ಬೆಂಗ್ರೆ ಬೀಚ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2018ರ ನವೆಂಬರ್ 17ರಂದು ಯುವತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ತೋಟ ಬೆಂಗ್ರೆ ಬೀಚ್‌ಗೆ ತೆರಳಿದ್ದ ವೇಳೆ, ಏಳು ಮಂದಿ ಅಪರಿಚಿತರು ಇಬ್ಬರ ಮೇಲೆ ದಾಳಿ ನಡೆಸಿದ್ದರು. ಯುವತಿಯ ಸ್ನೇಹಿತನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ ಆರೋಪಿಗಳು, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದರು. ಭಯದಿಂದ ಯುವತಿ ತಕ್ಷಣ ದೂರು ನೀಡದೆ, ಎರಡು ದಿನಗಳ ಬಳಿಕ ಆರೋಪಿಗಳಿಂದ ದೂರವಾಣಿ ಕರೆ ಬಂದ ನಂತರ ಮನೆಯವರಿಗೆ ವಿಷಯ ತಿಳಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 60/2018ರಡಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಅವರಲ್ಲಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಾಗಿದ್ದರು. ಉಳಿದ ನಾಲ್ವರು ಆರೋಪಿಗಳಾದ ಪ್ರಜ್ವಲ್ @ ಪಜ್ಜು, ಅರುಣ್ ಅಮೀನ್ @ ಅರುಣ್ ಎಸ್., ಆದಿತ್ಯ ಸಾಲಿಯಾನ್ @ ಆದಿತ್ಯ ಹಾಗೂ ಅಬ್ದುಲ್ ರಿಯಾಝ್ @ ರಿಯಾಝ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಅಂದಿನ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಕಲಾವತಿ ನಡೆಸಿದ್ದರು. ಬಳಿಕ ಅಂದಿನ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ ತನಿಖೆ ಮುಂದುವರಿಸಿದ್ದು, ನಂತರ ಐಪಿಎಸ್ ಅಧಿಕಾರಿ ಶ್ರೀನಿವಾಸ ಗೌಡ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸ್ಪೆಷಲ್ ಕೇಸ್ ನಂ. 31/2019ರ ವಿಚಾರಣೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ ಜುಲೈ 27, 2026ರಂದು ನ್ಯಾಯಾಲಯ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿತ್ತು.

ಅನಂತರ ಜುಲೈ 30ರಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ನಾಲ್ವರು ಆರೋಪಿಗಳಿಗೆ ಐಪಿಸಿ ಕಲಂ 376(ಡಿ) ಅಡಿಯಲ್ಲಿ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದರು. ಅಲ್ಲದೆ, ಕಲಂ 354, 506, 323 ಮತ್ತು 341ರಡಿ ಪ್ರತ್ಯೇಕ ಶಿಕ್ಷೆ ಹಾಗೂ ದಂಡವನ್ನೂ ವಿಧಿಸಿದ್ದಾರೆ.

ಇದೇ ವೇಳೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ವತಿಯಿಂದ ಸಂತ್ರಸ್ತ ಯುವತಿಗೆ ₹60,000 ಪರಿಹಾರ ಮಂಜೂರು ಮಾಡಲಾಗಿದೆ.

Post a Comment

Previous Post Next Post