Panambooru | 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ !

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ 3.8 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿ ಅಶೋಕ್ ಕೆ. (50)ಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ–ಎಫ್‌ಟಿಎಸ್‌ಸಿ-1 (ಪೊಕ್ಸೊ) 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ₹60,000 ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರದಂತೆ, 2025ರ ಮೇ 4ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವನ್ನು ಪಕ್ಕದ ಮನೆಯ ಅಶೋಕ್ ತನ್ನ ಮನೆಗೆ ಕರೆದುಕೊಂಡು ಹೋಗಿ ತಿಂಡಿ ನೀಡಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಮಗುವಿನ ತಾಯಿ ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಎಸಿಪಿ ನಜ್ಮಾ ಫಾರೂಕಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಜೆ.ಎಸ್. ಅವರು ಗುರುವಾರ ತೀರ್ಪು ಪ್ರಕಟಿಸಿ, ಪೊಕ್ಸೊ ಕಾಯ್ದೆಯ ಕಲಂ 10ರಡಿ ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹60,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.

ಇದಲ್ಲದೆ, ದಂಡದ ಮೊತ್ತದಲ್ಲಿ ₹50,000 ಅನ್ನು ಸಂತ್ರಸ್ತ ಮಗುವಿಗೆ ಪರಿಹಾರವಾಗಿ ನೀಡುವಂತೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಹೆಚ್ಚುವರಿಯಾಗಿ ₹1 ಲಕ್ಷ ಪರಿಹಾರ ಧನ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.

Post a Comment

Previous Post Next Post