ಬಂಟ್ವಾಳ: ವೃದ್ಧೆಯೊಬ್ಬರನ್ನು ಚಿನ್ನಾಭರಣ ದೋಚುವ ಉದ್ದೇಶದಿಂದ ಕೊಲೆಗೈದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳದ ಅಮ್ಮುಂಜೆ ನಿವಾಸಿ 73 ವರ್ಷದ ಬೆನಡಿಕ್ಟ್ ಕಾರ್ಲೋ ಅವರ ಆರೈಕೆ ಮಾಡುತ್ತಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ, ತನ್ನ ಸ್ನೇಹಿತರಾದ ಸತೀಶ ನಾಯಕ್ ಮತ್ತು ಚರಣ್ ಕುಮಾರ್ ಅವರೊಂದಿಗೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಮೊದಲು ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದರೂ ಅದು ವಿಫಲವಾದ ಬಳಿಕ, 2021ರ ಜನವರಿ 25ರಂದು ರಾತ್ರಿ ಉಸಿರುಗಟ್ಟಿಸಿ ಹತ್ಯೆ ನಡೆಸಿದ್ದರು.
ಬಳಿಕ ಮೃತರ ಬಳಿ ಇದ್ದ 61.070 ಗ್ರಾಂ ತೂಕದ, ಅಂದಿನ ಸುಮಾರು ₹3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ, ದರೋಡೆ, ಸಂಚು ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಾಗಿತ್ತು. ಆಗಿನ ಪೊಲೀಸ್ ಅಧಿಕಾರಿಗಳ ತನಿಖೆಯಲ್ಲಿ ಆರೋಪಿಗಳ ವಿರುದ್ಧ ಸಮರ್ಪಕ ಸಾಕ್ಷ್ಯ ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಜುಲೈ 28ರಂದು ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಮೂವರೂ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದರು. ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.
Post a Comment