Mangalore | 12 ವರ್ಷಗಳ ಬಳಿಕ ಗಂಗಾಧರ ಪಾಂಗಾಳ ಕೊಲೆ ಪ್ರಕರಣದ ತೀರ್ಪು ಪ್ರಕಟ : ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್


ಮಂಗಳೂರು : ಸುಮಾರು 12 ವರ್ಷಗಳ ಹಿಂದೆ ನಡೆದಿದ್ದ ಮೀನಕಳಿಯ ಗಂಗಾಧರ ಪಾಂಗಾಳ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2014ರ ಮೇ 15ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯಾ ಗಣೇಶ್ ಶಿಪ್ಪಿಂಗ್ ಗೋಡೌನ್ ಸಮೀಪ ಗಂಗಾಧರ ಪಾಂಗಾಳರನ್ನು ಬೊಲೆರೋ ವಾಹನದಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಬಿಂಬಿಸಲಾಗಿದ್ದರೂ, ನಂತರದ ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು.

ಮೊಗವೀರ ಮಹಾಸಭೆಯ ಸದಸ್ಯತ್ವ ಅಮಾನತಿಗೆ ಗಂಗಾಧರ ಪಾಂಗಾಳ ಕಾರಣಕರ್ತರು ಎಂದು ಭಾವಿಸಿದ್ದ ಆರೋಪಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಕೃತ್ಯ ಎಸಗಿದ್ದರೆಂದು ತನಿಖೆಯಿಂದ ಸಾಬೀತಾಯಿತು.

ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ಅವರು ಆರೋಪಿಗಳಾದ ಸತೀಶ್ ಬೈಕಂಪಾಡಿ (57), ಪುಷ್ಪರಾಜ್ (47), ಹರೀಶ್ ಬೈಕಂಪಾಡಿ (61) ಹಾಗೂ ಭಾಸ್ಕರ್ ಬೈಕಂಪಾಡಿ (63) ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಿದರು. ದಂಡ ಪಾವತಿಸದಿದ್ದರೆ ಒಂದು ವರ್ಷದ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕಾಗಿದೆ. ಜೊತೆಗೆ ಸಾಕ್ಷ್ಯ ನಾಶಪಡಿಸಿದ ಪ್ರಕರಣದಲ್ಲಿ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡವೂ ವಿಧಿಸಲಾಗಿದೆ.

ಒಟ್ಟು ₹60,000 ದಂಡದಲ್ಲಿ ₹50,000 ಅನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ಹಾಗೂ ₹10,000 ಅನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಬಳಸಿದ್ದ ಬೊಲೆರೋ ಸೇರಿದಂತೆ ಮೂರು ವಾಹನಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ.

ಪ್ರಕರಣದ ತನಿಖೆಯನ್ನು ಅಂದಿನ ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ, ರವೀಶ್ ನಾಯಕ್ ಅವರು ನಡೆಸಿದ್ದು, ಲೋಕೇಶ್ ಎ.ಸಿ. ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದ ಮಂಡಿಸಿದ್ದರು.

Post a Comment

Previous Post Next Post